66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಈಗಾಗಲೇ ಪ್ರಕಟವಾಗಿದ್ದು, ಇದೇ ವಿಚಾರಕ್ಕೆ ಮಲಯಾಳಂ ಸ್ಟಾರ್ ನಟನ ಫ್ಯಾನ್ಸ್ ಜ್ಯೂರಿ ಮೇಲೆ ಕೋಪಗೊಂಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಎಂದು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ಸೂಪರ್ಸ್ಟಾರ್ ಮಮ್ಮುಟ್ಟಿ ನಟನೆಯ ವಿಭಿನ್ನ ಕಥಾಹಂದರದ ಪೇರಂಬು ಸಿನಿಮಾ ತಮಿಳಿನಲ್ಲಿ ರಿಲೀಸ್ ಆಗಿತ್ತು. ಆದರೆ ಈ ಚಿತ್ರಕ್ಕೆ ಪ್ರಶಸ್ತಿ ಬಾರದಿರುವುದು ಮಮ್ಮುಟ್ಟಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸದ್ಯ ಮಮ್ಮುಟ್ಟಿ ಅಭಿಮಾನಿಗಳು ಜ್ಯೂರಿ ಸದಸ್ಯ ರಾಹುಲ್ ರವೈಲ್ ಫೇಸ್ಬುಕ್ಗೆ ಆಕ್ರೋಶದಲ್ಲಿ ಮೆಸೇಜ್ಗಳನ್ನು ಕಳುಹಿಸುತ್ತಿದ್ದಾರೆ. ಪೇರಂಬು ಚಿತ್ರವನ್ನು ಕಡೆಗಣಿಸಿದ್ದಕ್ಕೆ ರಾಹುಲ್ ವಿರುದ್ಧ ಬೈಗುಳಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಸದ್ಯ ಈ ಬೆಳವಣಿಗೆಗೆ ಫೇಸ್ಬುಕ್ ಮೂಲಕ ಸ್ವತಃ ರಾಹುಲ್ ಪೋಸ್ಟ್ ಒಂದನ್ನು ಮಾಡಿದ್ದು ಕೆಲ ಹೊತ್ತಿನಲ್ಲೇ ಡಿಲೀಟ್ ಮಾಡಿದ್ದಾರೆ.
"ಹಾಯ್ ಮಿ.ಮಮ್ಮುಟ್ಟಿ, ನನ್ನ ಬಗ್ಗೆ ತುಂಬಾ ಬೈಗುಳದ ಸಂದೇಶಗಳು ಇನ್ಬಾಕ್ಸಿಗೆ ಬರುತ್ತಿವೆ. ನಿಮ್ಮ ಅಭಿಮಾನಿಗಳು, ಅಭಿಮಾನಿಗಳ ಸಂಘಗಳಿಂದ ಈ ಮೆಸೇಜ್ಗಳು ಬರುತ್ತಿದ್ದು, ಪೇರಂಬು ಚಿತ್ರಕ್ಕೆ ನಿಮಗೆ ಪ್ರಶಸ್ತಿ ಬಾರದಿರುವುದೇ ಇದಕ್ಕೆಲ್ಲಾ ಕಾರಣ. ಮೊದಲಿಗೆ, ಜ್ಯೂರಿ ನಿರ್ಣಯವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ. ಎರಡನೇಯದಾಗಿ, ಪೇರಂಬು ಚಿತ್ರವನ್ನು ನಾವು ತಿರಸ್ಕರಿಸಿಲ್ಲ. ಪ್ರಾದೇಶಿಕ ಸಮಿತಿಯೇ ಚಿತ್ರವನ್ನು ತಿರಸ್ಕರಿಸಿತ್ತು. ಹೀಗಾಗಿ ನಮ್ಮ ಸಮಿತಿಗೆ ಆ ಚಿತ್ರ ಬಂದಿರಲಿಲ್ಲ. ನಿಮ್ಮ ಅಭಿಮಾನಿಗಳು ಕಳೆದುಹೋದ ವಿಚಾರಕ್ಕೆ ಜಗಳ ಮಾಡುವುದು ಸರಿಯಲ್ಲ ಮತ್ತು ಯಾವತ್ತು ಜ್ಯೂರಿಯನ್ನು ಪ್ರಶ್ನಿಸಬಾರದು" ಎಂದು ರಾಹುಲ್ ರವೈಲ್ ತಮ್ಮ ಎಫ್ಬಿ ಖಾತೆಯಲ್ಲಿ ಬರೆದುಕೊಂಡಿದ್ದರು.
ರಾಹುಲ್ ಎಫ್ಬಿ ಪೋಸ್ಟ್ ಕೆಲವೇ ಹೊತ್ತಿನಲ್ಲಿ ಮಮ್ಮುಟ್ಟಿ ಗಮನಕ್ಕೆ ಬಂದಿದ್ದು, ತಕ್ಷಣವೇ ಕ್ಷಮೆಯಾಚಿಸಿದ್ದಾರೆ. "ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೂ ಸದ್ಯ ನಡೆದಿರುವ ಬೆಳವಣಿಗೆ ಬಗ್ಗೆ ನಾನು ಕ್ಷಮೆ ಕೇಳುತ್ತೇನೆ" ಎಂದಿದ್ದಾರೆ.