ಡಾಲಿ ಧನಂಜಯ್ ನಟಿಸುತ್ತಿರುವ ಹೊಸ ಸಿನಿಮಾ 'ರತ್ನನ್ ಪ್ರಪಂಚ' ಚಿತ್ರಕ್ಕೆ ರೆಬಾ ಮೋನಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರೆಬಾ ಮೋನಿಕ ಮಲಯಾಳಿ ಹುಡುಗಿ ಆದರೂ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಮೋನಿಕ ಸಂತೋಷ ವ್ಯಕ್ತಪಡಿಸಿದ್ದಾರೆ.
ರೆಬಾ ಈ ಹಿಂದೆ ಕನ್ನಡದ 'ಸಕಲ ಕಲಾವಲ್ಲಭ' ಚಿತ್ರಕ್ಕೂ ನಾಯಕಿ ಆಗಿ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಆಪರೇಷನ್ ಅಲಮೇಲಮ್ಮ, ಕವಲುದಾರಿ ನಟ ರಿಷಿ ಆ ಚಿತ್ರದ ನಾಯಕ. ಕಳೆದ ಮಾರ್ಚ್ನಲ್ಲಿ ಆರಂಭವಾಗಿದ್ದ ಈ ಸಿನಿಮಾವನ್ನು 'ಪೃಥ್ವಿ' ನಿರ್ದೇಶಕ ಜೇಕಬ್ ವರ್ಗೀಸ್ ಆರಂಭಿಸಿದ್ದರು.
ರೆಬಾ ಮೋನಿಕ ಸದ್ಯಕ್ಕೆ 'ಓಣಂ' ಹಬ್ಬದ ಆಚರಣೆಯಲ್ಲಿದ್ದಾರೆ. ರೆಬಾ 4 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ ಅವರು ಮಾಡೆಲ್ ಆಗಿ ಕೆಲಸ ಮಾಡಿದ್ದರು. ಮಲಯಾಳಂನ ಟಿವಿ ಧಾರಾವಾಹಿಯಲ್ಲಿ ಕೂಡಾ ಅವರು ಕಾಣಿಸಿಕೊಂಡಿದ್ದಾರೆ. ಮಲಯಾಳಂನ 'ಜಾಕೊಬಿಂಟಿ ಸ್ವರ್ಗರಾಜ್ಯಂ' ಚಿತ್ರದ ಮೂಲಕ ಸಿನಿಮಾ ಕರಿಯರ್ ಆರಂಭಿಸಿದ ಮೋನಿಕಾ ಸೆಪ್ಟೆಂಬರ್ನಲ್ಲಿ 'ರತ್ನನ್ ಪ್ರಪಂಚ' ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ರೋಹಿತ್ ಪದಕಿ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ರೋಹಿತ್ ಪದಕಿ 'ದಯವಿಟ್ಟು ಗಮನಿಸಿ' ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದರು. ಕೆಆರ್ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಜನೀಷ್ ಲೋಕನಾಥ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದರೆ, ಶ್ರೀಶ ಕುಡುವಲ್ಲಿ ಛಾಯಾಗ್ರಹಣ ಮಾಡಿದ್ದಾರೆ.