ಹಿಪ್‍ಹಾಪ್ ಗಾಯನಕ್ಕೆ ಬಹಳ ಜನಪ್ರಿಯರಾಗಿರುವ ಯೋಗಿ, ಮಲೇಷ್ಯಾದಲ್ಲಿ ತಮ್ಮದೇ ಸ್ವಂತ ಬ್ಯಾಂಡ್ ಹೊಂದಿದ್ದಾರೆ. ಮಲೇಷ್ಯನ್ ರ್ಯಾಪರ್ ಎಂದು ಫೇಮಸ್ ಆಗಿರುವ ಯೋಗಿ, ಇದೀಗ `ಸಲಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಂಗೀತ ನಿರ್ದೇಶಕ ಚರಣ್‍ರಾಜ್, ಈ ಹಿಂದೆ 'ಟಗರು' ಚಿತ್ರದ `ಟಗರು ಬಂತು ಟಗರು ಹಾಡು ಹಾಡಲು ಆ್ಯಂಟೋನಿ ದಾಸನ್ ಎಂಬ ತಮಿಳು ಗಾಯಕರನ್ನು ಕರೆದುಕೊಂಡು ಬಂದಿದ್ದರು. ಕನ್ನಡಕ್ಕೆ ಈ ಧ್ವನಿ ಬಹಳ ಫ್ರೆಶ್ ಎಂದೆನಿಸಿಕೊಂಡಿದ್ದು ಮಾತ್ರವಲ್ಲದೆ, `ಟಗರು ಬಂತು ಟಗರು' ಹಾಡು ಸೂಪರ್ ಹಿಟ್ ಆಗಿತ್ತು.
ಇದೀಗ `ಸಲಗ' ಚಿತ್ರದ ಟೈಟಲ್ ಹಾಡಿಗೆ ಯೋಗಿ ಬಿ ಅವರಿಂದ ಹಾಡಿಸಿದ್ದಾರೆ ಚರಣ್‍ರಾಜ್. ಇತ್ತೀಚೆಗೆ ಹಾಡಿನ ರೆಕಾರ್ಡಿಂಗ್ ಚೆನ್ನೈನಲ್ಲಿ ನಡೆದಿದೆ.

'ಸಲಗ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತಕ್ಕೆ ಬಂದಿದೆ. ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿಬೇಕು ಎನ್ನುವಷ್ಟರಲ್ಲೇ ಲಾಕ್‍ಡೌನ್ ಘೋಷಣೆಯಾಯಿತು. ಇದೀಗ ಚಿತ್ರದ ಕೆಲಸಗಳೆಲ್ಲಾ ಮುಗಿಯುವ ಹಂತಕ್ಕೆ ಬಂದಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವರೇ ಪ್ರಮುಖ ಪಾತ್ರ ಮಾಡಿದ್ದು, ಧನಂಜಯ್, ಕಾಕ್ರೋಚ್ ಸುಧಿ, ಸಂಜನಾ ಆನಂದ್ ಮುಂತಾದವರು ನಟಿಸಿದ್ದಾರೆ. ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.