'ಒಂದು ಮೊಟ್ಟೆ ಕಥೆ' ಸಿನಿಮಾ ಮೂಲಕ ಮನೆಮಾತಾಗಿದ್ದ ರಾಜ್ ಬಿ. ಶೆಟ್ಟಿ ಗುಪ್ತಚರ ಅಧಿಕಾರಿಯಾಗಿ ನಟಿಸುತ್ತಿರುವ ಹೊಸ ಸಿನಿಮಾ ಮಹಿರಾ. ಟೀಸರ್ನಿಂದಲೇ ಈ ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನಿರ್ದೇಶಕ ಮಹೇಶ್ ಗೌಡ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ, ರಾಜ್ ಬಿ. ಶೆಟ್ಟಿ ಅಲ್ಲದೆ, ಬಾಂಬೆ ರಂಗಭೂಮಿ ಕಲಾವಿದೆ ವರ್ಜಿನಿಯಾ ರೊಡ್ರಿಗಸ್, ಚೈತ್ರಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಅಮ್ಮ-ಮಗಳ ಕಥೆ. ವರ್ಜಿನಿಯಾ ರೊಡ್ರಿಗಸ್ ತಾಯಿ ಪಾತ್ರದ ಜೊತೆ ಇಂಟಲಿಜೆನ್ಸ್ ಆಫೀಸರ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ವಿಭಿನ್ನ ಬಗೆಯ ಆ್ಯಕ್ಷನ್ಗಳನ್ನು ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜ, ವರ್ಜಿನಿಯಾ ಅವರಿಗೆ ಆರು ತಿಂಗಳು ಟ್ರೈನಿಂಗ್ ಕೊಟ್ಟು ತೆರೆ ಮೇಲೆ ಫೈಟ್ ಮಾಡಿಸಿರುವುದು ವಿಶೇಷ.
ಚೈತ್ರಾ ಆಚಾರ್ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಶಾಂತಿಯುತ ಜೀವನ ನಡೆಸುತ್ತಿದ್ದ ತಾಯಿ-ಮಗಳ ಜೀವನದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದು ಅದರಿಂದ ಏನೆಲ್ಲಾ ಜರುಗುತ್ತದೆ ಎನ್ನುವುದು 'ಮಹಿರಾ' ಚಿತ್ರದ ಕಥೆ. ಜುಲೈ 22 ಕ್ಕೆ ಸಿನಿಮಾ ವರ್ಲ್ಡ್ ವೈಡ್ ತೆರೆ ಕಾಣಲಿದೆ. ರಾಜ್ ಬಿ. ಶೆಟ್ಟಿ ಅನುಪಸ್ಥಿತಿಯಲ್ಲಿ ನಿರ್ದೇಶಕ ಮಹೇಶ್ ಗೌಡ ಚಿತ್ರದ ರಿಲೀಸ್ ಡೇಟ್ ಅನೌಸ್ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಶ್ವಜಿತ್ ರಾವ್ ಹಾಗು ಪ್ರತಾಪ್ ಭಟ್ ಬರೆದಿರುವ ಗೀತರಚನೆಗೆ ನೀಲಿಮ್ ರಾವ್ ಹಾಗೂ ರಾಕೇಶ್ ಸಂಗೀತ ನೀಡಿದ್ದಾರೆ. ಲಂಡನ್ ಮೂಲದವರಾದ ವಿವೇಕ್ ಕೋಡಪ್ಪ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.