ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ರಿಲೀಸ್ ಆಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ ನಟ ಇದೀಗ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಚಿಕಿತ್ಸೆಗೆಂದು ಅಮೆರಿಕಗೆ ತೆರಳಿದ್ದಾರೆ.
ಈ ಹಿಂದೆ 'ಆಗಡು' ಸಿನಿಮಾ ಶೂಟಿಂಗ್ ವೇಳೆ ಮಹೇಶ್ ಬಾಬು ಮೊಣಕಾಲಿಗೆ ಪೆಟ್ಟಾಗಿತ್ತು. ಆದ್ರೆ, ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಸದ್ಯ 'ಸರಿಲೇರು ನೀಕೆವ್ವರು' ಸಿನಿಮಾದ ಪ್ರಚಾರದ ಕಾರ್ಯ ಮುಗಿದಿದ್ದು, ಕುಟುಂಬ ಸಮೇತರಾಗಿ ಮಹೇಶ್ ಯುಎಸ್ಗೆ ಹಾರಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ ಪಕ್ಷ 5 ತಿಂಗಳ ವಿಶ್ರಾಂತಿ ಬೇಕೆಂದು ವೈದ್ಯರು ಸೂಚಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.