ಗುಂಡ್ಲುಪೇಟೆ: ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡಾ ಏರಿಕೆಯಾಗುತ್ತಲೇ ಇದೆ. ಲಾಕ್ಡೌನ್ ತೆರವುಗೊಳಿಸಿರುವುದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಬರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ನಿಯಮ ಮಾಡಿದೆ.
ಇನ್ನು ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. ಕೆಲವೆಡೆ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುವ ಮೂಲಕ ಚಿತ್ರೀಕರಣ ನಡೆಸುತ್ತಿದ್ದರೆ. ಶ್ರಿ ಮುರಳಿ ಅಭಿನಯದ 'ಮದಗಜ' ಚಿತ್ರತಂಡ ಮಾತ್ರ ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸುತ್ತಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ 'ಮದಗಜ' ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಗುಂಪು ಗುಂಪಾಗಿ ಜನರು ಆಗಮಿಸುತ್ತಿದ್ದಾರೆ. ಈ ವೇಳೆ 50 ಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿತ್ತು.
ಚಿತ್ರೀಕರಣ ನೋಡಲು ಬಂದವರು ಮಾಸ್ಕ್ ಧರಿಸಿದ್ದರೆ ಚಿತ್ರತಂಡದ ಕೆಲವು ಸದಸ್ಯರು ಬಂದು ಮಾಸ್ಕ್ ತೆಗೆಯಲು ಹೇಳುತ್ತಿದ್ದರು ಎಂದು ಕೆಲವರು ಆರೋಪಿಸಿದ್ದಾರೆ. "ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿದರೆ ಸಮಸ್ಯೆ ಅನುಭವಿಸುವವರು ಗ್ರಾಮದ ಜನರು. ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳು ಇದ್ದು ನಿಯಮ ಪಾಲಿಸುವಂತೆ ಸೂಚಿಸಿದರೆ ಮುಂದೆ ಉಂಟಾಗುವ ಅನಾಹುತ ತಪ್ಪಿಸಬಹುದು" ಎಂದು ರೈತ ಮುಖಂಡ ಹಂಗಳ ಮಹದೇವಪ್ಪ ತಿಳಿಸಿದರು.