'ಲೂಸಿಯಾ' ಸಿನಿಮಾ ನಿರ್ದೇಶಕ ಪವನ್ ಕುಮಾರ್ ವ್ಯಕ್ತಿಯೊಬ್ಬರ ವಿರುದ್ಧ ದೂರು ನೀಡಿದ್ದಾರೆ. ಪ್ರಭು ಎಂಬುವವರ ಮೇಲೆ ಪವನ್ ಕುಮಾರ್ ದೂರು ನೀಡಿದ್ದು, ಈತ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ತಮ್ಮ ಫೇಸ್ಬುಕ್ ಲೈವ್ನಲ್ಲಿ ಪವನ್ ಕುಮಾರ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ಹೆಸರು ಹೇಳಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ಅದರಲ್ಲಿ ಪ್ರಭು ಎಂಬಾತ ನನ್ನ ಹೆಸರು ಹೇಳಿಕೊಂಡು ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದು ಇಲ್ಲದ ಕಾರಣ ಹೇಳಿ ಹಣ ಕೀಳುತ್ತಿದ್ದಾನೆ ಎಂಬ ವಿಚಾರ ನನ್ನ ಗಮನಕ್ಕೆ ತಿಳಿದುಬಂದಿದೆ. ದಯವಿಟ್ಟು ಯಾರೂ ಮೋಸ ಹೋಗಬೇಡಿ. ನನ್ನ ಹೆಸರಿನಿಂದ ನಿಮಗೆ ಮೆಸೇಜ್ ಬಂದರೆ ಅದನ್ನು ಇಗ್ನೋರ್ ಮಾಡಿ. ಈ ವಿಚಾರವಾಗಿ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಪವನ್ ಕುಮಾರ್ ಮನವಿ ಮಾಡಿದ್ದಾರೆ.
ಪವನ್ ಇತ್ತೀಚೆಗೆ ಎಫ್ಯುಸಿ ಎಂಬ ವೇದಿಕೆಯನ್ನು ಹುಟ್ಟುಹಾಕಿದ್ದು ಈ ವೇದಿಕೆ ಮೂಲಕ ಸಿನಿಮಾರಂಗಕ್ಕೆ ಸಂಬಂಧಿಸಿದ ಆಸಕ್ತಿಕರ ವಿಚಾರಗಳು ಹಾಗೂ ಸಮಸ್ಯೆಗಳನ್ನು ಚರ್ಚಿಸಲಾಗುತ್ತಿದೆ.