ಕಳೆದ ಬಾರಿ ಲಾಕ್ಡೌನ್ ಸಮಯದಲ್ಲಿ ಹಲವು ನಿರ್ದೇಶಕರು ಮನೆಯಲ್ಲಿದ್ದುಕೊಂಡೇ ಕಿರುಚಿತ್ರಗಳನ್ನು ಮಾಡಿದ್ದಾರೆ. ವೆಂಕಟೇಶ್ ಭಾರದ್ವಾಜ್, ಪದ್ಮಜಾ ರಾವ್, ವಿ. ಮನೋಹರ್ ಸೇರಿದಂತೆ ಹಲವರು ತಮ್ಮದೇ ರೀತಿಯಲ್ಲಿ ಚಿತ್ರ ಮತ್ತು ಕಿರುಚಿತ್ರಗಳನ್ನು ಮಾಡಿದ್ದಾರೆ. ಈಗ ‘ಲವ್ ಇನ್ ದಿ ಟೈಮ್ ಆಫ್ ಕೋವಿಡ್’ ಎಂಬ ಚಿತ್ರವೊಂದು ನಿರ್ಮಾಣವಾಗುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಮತ್ತು ಮಗಳು ಜಾನಕಿ ಖ್ಯಾತಿಯ ರಾಕೇಶ್ ಮಯ್ಯ ನಟಿಸಿದ್ದಾರೆ. ಜಯಂತ್ ಸೀಗೆ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.
ಇದೊಂದು ಪಕ್ಕಾ ರೊಮ್ಯಾಂಟಿಕ್ ಚಿತ್ರ ಎನ್ನುತ್ತಾರೆ ಜಯಂತ್ ಸೀಗೆ. ಇಲ್ಲಿ ಎಲ್ಲ ಕಲಾವಿದರೂ ಅವರವರ ಮನೆಯಿಂದಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದು, ಯಾರೂ ಮುಖಕ್ಕೆ ಮುಖ ಕೊಟ್ಟು ಕಾಣಿಸಿಕೊಂಡಿಲ್ಲ. ಮಲಯಾಳಂನ ‘ಸೀ ಯೂ ಸೂನ್’ ಶೈಲಿಯಲ್ಲಿ ಚಿತ್ರ ಮಾಡಿದ್ದೇವೆ. ಕಳೆದ ಡಿಸೆಂಬರ್ನಲ್ಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಇದುವರೆಗೂ ಶೇ.90 ರಷ್ಟು ಚಿತ್ರೀಕರಣ ಮುಗಿದಿದೆ.
ಈ ಚಿತ್ರದ ಕಥೆ ಕೇಳುತ್ತಿದ್ದಂತೆಯೇ ಶೃತಿ ಪ್ರಕಾಶ್ಗೆ ಖುಷಿಯಾಗಿ ಒಪ್ಪಿಕೊಂಡರಂತೆ. ಇದುವರೆಗೂ ಸಹಕಲಾವಿದರ ಜತೆಗೆ ನಟಿಸಿದ್ದೆ. ಇದೀಗ ಮೊದಲ ಬಾರಿ ನಾನೊಬ್ಬಳೇ ಕ್ಯಾಮೆರಾ ಎದುರು ನಟಿಸಿದ್ದೇನೆ ಎನ್ನುವ ಶೃತಿ, ಇಲ್ಲಿ ಶೀಲಾ ಎಂಬ ಯುವತಿಯ ಪಾತ್ರ ಮಾಡಿದ್ದಾರೆ. 10 ವರ್ಷದ ಬಳಿಕ ಕಾಲೇಜು ಸ್ನೇಹಿತ ಆನ್ಲೈನ್ನಲ್ಲಿ ಶೀಲಾಗೆ ಸಿಕ್ಕಾಗ, ಮುಂದೆ ಇಬ್ಬರ ಒಡನಾಟ ಎಲ್ಲಿಗೆ ಹೋಗುತ್ತದೆ ಎಂಬುದೇ ಕಥಾ ಹಂದರ.
ಈ ಚಿತ್ರದಲ್ಲಿ ಶೃತಿ ಮತ್ತು ರಾಕೇಶ್ ಅಷ್ಟೇ ಅಲ್ಲ, ಅಪೂರ್ವ ಭಾರದ್ವಾಜ್, ಗೌತಮ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಭರತ್ ಬಿ.ಜೆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಪ್ರದೀಪ್ ರೆಡ್ಡಿ ಛಾಯಾಗ್ರಹಣ ಮಾಡಿದ್ದಾರೆ.