ಸಿನಿಮಾಗಳ ಐಟಮ್ ಹಾಡುಗಳಿಗೆ ನಾಯಕ, ನಾಯಕಿಯರು ಆಗಾಗ್ಗೆ ಹೆಜ್ಜೆ ಹಾಕುತ್ತಿರುತ್ತಾರೆ. ಅದರಲ್ಲೂ ಸಾಕಷ್ಟು ಖ್ಯಾತಿ ಪಡೆದಿರುವ ನಾಯಕ ಅಥವಾ ನಾಯಕಿ ಹೊಸಬರ ಸಿನಿಮಾಗೆ ಹೆಜ್ಜೆ ಹಾಕಿದರೆ ಆ ಸಿನಿಮಾಗೆ ಒಂದು ಪವರ್ ಸಿಗುವ ಖುಷಿಯಲ್ಲಿರುತ್ತದೆ ಚಿತ್ರತಂಡ.
ಕೆಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿ ವಿಭಿನ್ನ ಕಥೆಯೊಂದಿಗೆ ತಯಾರಾಗಿರುವ ಚಿತ್ರ ‘ಕೊಡೆ ಮುರುಗ’. ಚಿತ್ರದುದ್ದಕ್ಕೂ ನಾಯಕ ತನ್ನನ್ನು ಇತರರು ಹೀಯಾಳಿಸುವುದನ್ನೇ ಅರಗಿಸಿಕೊಳ್ಳಬೇಕಾದ ವಿಭಿನ್ನ ಪಾತ್ರವಿದೆ. ಈ ಪಾತ್ರವನ್ನು ಮುನಿಕೃಷ್ಣ ನಿರ್ವಹಿಸಿದ್ದಾರೆ. ಈಗ ಈ ಚಿತ್ರಕ್ಕೆ ಲೂಸ್ ಮಾದ ಯೋಗಿ ಎಂಟ್ರಿ ಆಗಿದ್ದಾರೆ. ಆದರೆ ಅವರು ನಟಿಸುತ್ತಿರುವುದು ವಿಶೇಷ ಹಾಡೊಂದರಲ್ಲಿ. ಸುಬ್ರಹ್ಮಣ್ಯ ಪ್ರಸಾದ್ ಬರೆದಿರುವ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ಎಂಬ ಹಾಡಿಗೆ ಯೋಗೀಶ್ ಹೆಜ್ಜೆ ಹಾಕಿದ್ದಾರೆ. ಸ್ಟಾರ್ ಗಿರಿ ನೃತ್ಯ ನಿರ್ದೇಶನದ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದಾರೆ. ಸುಬ್ರಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಸಹ ಮಾಡಿದ್ದಾರೆ. ರುದ್ರಮುನಿ ಬೆಳೆಗೆರೆ ಛಾಯಾಗ್ರಹಣ, ತ್ಯಾಗರಾಜ್ ಸಂಗೀತ, ಸಿ.ರವಿಚಂದ್ರನ್ ಸಂಕಲನ, ಭೂಷಣ್, ಸ್ಟಾರ್ ಗಿರಿ ನೃತ್ಯ ನಿರ್ದೇಶನ, ಮಾಸ್ ಮಾದ ಸಾಹಸ ಈ ಚಿತ್ರಕ್ಕಿದೆ.
ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ, ಸ್ವಾತಿ ಗುರುದತ್, ಅರವಿಂದ್ ರಾವ್, ಅಶೋಕ್ ಶರ್ಮ, ರಾಕ್ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜ, ಕುರಿ ಪ್ರತಾಪ್, ಗೋವಿಂದೇಗೌಡ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.