ಕಲರ್ಸ್ ಕನ್ನಡ ವಾಹಿನಿಯಲ್ಲಿ ಏಳು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯು ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡಿದೆ. ಏಳು ವರ್ಷಗಳಿಂದ ಜನರನ್ನು ಮನರಂಜಿಸುತ್ತಿದ್ದ ಈ ಧಾರಾವಾಹಿ ವಿಭಿನ್ನ ಕಥೆಯ ಮೂಲಕ ವೀಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು. ಧಾರಾವಾಹಿಯೇನೋ ಸುಖಾಂತ್ಯದ ಮೂಲಕ ಮುಕ್ತಾಯಗೊಂಡಿತು. ಆದರೆ, ಕಲಾವಿದರು? ಅವರೇನು ಮಾಡುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನ ನಾವು ನಿಮಗೆ ತಿಳಿಸಲಿದ್ದೇವೆ ನೋಡಿ.
ನೇಹಾ ಗೌಡ: ಏಳು ವರ್ಷಗಳಿಂದ ಗೊಂಬೆ ಅಲಿಯಾಸ್ ಶ್ರುತಿಯಾಗಿ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದ ನೇಹಾ ಗೌಡ ಈ ಮೊದಲು ಒಂದೆರಡು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಜನ ಅವರನ್ನು ಮೆಚ್ಚಿದ್ದು ಗೊಂಬೆಯಾಗಿ ಬದಲಾದ ಬಳಿಕವೇ! ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೆಳೆದ ನೇಹಾ ಗೌಡ, ಮುಂದೆ ಕಲರ್ಸ್ ಕನ್ನಡದಲ್ಲಿ ಆರಂಭವಾದ ಮೂರು ಗಂಟು ಧಾರಾವಾಹಿಯಲ್ಲಿನ ಶುಭವಿವಾಹ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಆ ಮೂಲಕ ನಿರೂಪಕಿಯಾಗಬೇಕು ಎಂಬ ತಮ್ಮ ಆಸೆಯನ್ನು ಪೂರೈಸಿಕೊಂಡರು.
ಚಂದು ಗೌಡ: ನಾಯಕ ಚಂದು ಆಗಿ ನಟಿಸಿರುವ ಚಂದು ಗೌಡ, ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಕೂಡಾ ತಮ್ಮ ನಟನಾ ಛಾಪು ಪಸರಿಸುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ತೆಲುಗು ಭಾಷೆಯ ತ್ರಿನಯಿನಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ.
ರಶ್ಮಿ ಪ್ರಭಾಕರ್: ಚಿನ್ನು ಅಲಿಯಾಸ್ ಲಕ್ಷ್ಮಿ ಆಗಿ ನಟಿಸುತ್ತಿದ್ದ ಕವಿತಾ ಗೌಡ ಪಾತ್ರಕ್ಕೆ ಬಾಯ್ ಹೇಳಿದಾಗ ಆ ಜಾಗಕ್ಕೆ ಬಂದವರೇ ರಶ್ಮಿ ಪ್ರಭಾಕರ್. ಜೀವನಚೈತ್ರ ಧಾರಾವಾಹಿಯಲ್ಲಿ ತಂಗಿಯಾಗಿ ನಟಿಸಿದ್ಧ ರಶ್ಮಿ, ನಾಯಕಿಯಾಗಿ ಕಾಣಿಸಿಕೊಂಡಿದ್ದು ಲಕ್ಷ್ಮಿ ಬಾರಮ್ಮ ಮೂಲಕ. ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ರಶ್ಮಿ ತೆಲುಗಿನ ಪೌರ್ಣಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕವಿತಾ ಗೌಡ : ಚಿನ್ನುವಾಗಿ ಕಿರುತೆರೆ ಲೋಕಕ್ಕೆ ಬಂದಿರುವ ಕವಿತಾ ಗೌಡರನ್ನು ಜನ ಗುರುತಿಸಿದ್ದಾರೆ ಎಂದರೆ ಲಕ್ಷ್ಮಿ ಬಾರಮ್ಮ ಧಾರಾವಾಹಿಯೇ ಕಾರಣ. ಈ ಧಾರಾವಾಹಿಯಿಂದ ಹೊರಬಂದ ಬಳಿಕ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ನಟಿಸಿದ್ದ ಈಕೆಯನ್ನು ಆಗಲೂ ಜನ ಗುರುತಿಸುತ್ತಿದ್ದದ್ದು ಚಿನ್ನುವಾಗಿ. ಮುಂದೆ ಬಿಗ್ ಬಾಸ್ ಗೂ ಕಾಲಿಟ್ಟ ಆಕೆ ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿ.
ಅನಿಕಾ ಸಿಂಧ್ಯಾ: ಧಾರಾವಾಹಿಯಲ್ಲಿನ ಬ್ಯೂಟಿಫುಲ್ ವಿಲನ್ ಕುಮುದಾ ಆಗಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಅನಿಕಾ ಸಿಂಧ್ಯಾ, ಈ ಮೊದಲು ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ ಜನ ಅವರನ್ನು ಹೆಚ್ಚು ಗುರುತಿಸಿದ್ದು ಕುಮುದಾಳಾಗಿ ಬದಲಾದ ಬಳಿಕ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ಅಭಿನಯಿಸುತ್ತಿದ್ದಾರೆ ಅನಿಕಾ. ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ 2 ನಲ್ಲೂ ಈಕೆ ಭಾಗವಹಿಸಿದ್ದರು.
ರೋಹಿತ್: ಅನಿರುದ್ಧ್ ಅಲಿಯಾಸ್ ಅರುಣ್ ಆಗಿ ನಟಿಸಿದ್ದ ಚಾಕೋಲೆಟ್ ಹೀರೋ ರೋಹಿತ್ ಇದೀಗ ಹೊಸ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸಂಘರ್ಷ ಧಾರಾವಾಹಿಯಲ್ಲಿ ರೋಹಿತ್ ಬಣ್ಣ ಹಚ್ಚಲಿದ್ದಾರೆ.
ಲಕ್ಷ್ಮಿ ಸಿದ್ಧಯ್ಯ: ಗೊಂಬೆಯ ಅಮ್ಮನಾಗಿ ನಟಿಸಿರುವ ಲಕ್ಷ್ಮಿ ಸಿದ್ಧಯ್ಯ ಕಿರುತೆರೆಗೆ ಹೊಸಬರೇನಲ್ಲ. ಈಗಾಗಲೇ ಸುಮಾರು ಧಾರಾವಾಹಿಗಳಲ್ಲಿ ನಟಿಸಿರುವ ಈಕೆ ಸದ್ಯ ಉದಯ ವಾಹಿನಿಯ ನಾಯಕಿ ಧಾರಾವಾಹಿಯಲ್ಲಿ ಅಮ್ಮನಾಗಿ ಅಭಿನಯಿಸುತ್ತಿದ್ದಾರೆ.