ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇದ್ದಿದ್ದರೆ ಬಾಕಿ ಇರುವ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಿದ್ದರು. ಚಿರು ಅಭಿನಯದ 'ಶಿವಾರ್ಜುನ' ಸಿನಿಮಾ ಅಕ್ಟೋಬರ್ 16 ರಂದು ರೀ ರಿಲೀಸ್ ಆಗುತ್ತಿದೆ. ಮರುದಿನ ಅಂದರೆ ಅಕ್ಟೋಬರ್ 17 ರಂದು ಚಿರು ಜನ್ಮದಿನವಾಗಿದ್ದು ಆ ದಿನ 'ಕ್ಷತ್ರಿಯ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ತಮ್ಮ ಮೆಚ್ಚಿನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಕೂಡಾ ಅವರ ಹುಟ್ಟುಹಬ್ಬ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಸಂಜನಾ ಆನಂದ್ ನಟನೆಯ ಕ್ಷತ್ರಿಯ ಶೇ.90 ರಷ್ಟು ಚಿತ್ರೀಕರಣ ಮುಗಿಸಿದೆ. ಚಿರಂಜೀವಿ ಸರ್ಜಾ ಭಾಗದ ಚಿತ್ರೀಕರಣ ಕೂಡಾ ಪೂರ್ಣಗೊಂಡಿತ್ತು. ಚಿತ್ರವನ್ನು ಅನಿಲ್ ಮಂಡ್ಯ ನಿರ್ದೇಶಿಸುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಹೋರಾಡುವ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ಚಿರು ಸರ್ಜಾ ಅಭಿನಯಿಸಿದ್ದಾರೆ. ಇವರೊಂದಿಗೆ ಸುಧಾರಾಣಿ, ದೇವರಾಜ್, ಶ್ರೀನಾಥ್, ಸಾಧು ಕೋಕಿಲ, ಅಚ್ಯುತ್‍ಕುಮಾರ್, ವಿಶಾಲ್ ಹೆಗ್ಡೆ, ಮೋಹನ್, ಅಶ್ವಿನಿಗೌಡ, ಭಜರಂಗಿ ಚೇತನ್, ಹೊನ್ನವಳ್ಳಿ ಕೃಷ್ಣ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.
'ಕ್ಷತ್ರಿಯ' ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಸಂಭಾಷಣೆ ರಚಿಸಿದ್ದಾರೆ. ರವಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಧರ್ಮವಿಶ್ ಸಂಗೀತ ಸಂಯೋಜಿಸಿದ್ದಾರೆ. ಕೆ. ರವಿವರ್ಮ ಸಾಹಸ, ರಾಜನ್ ಸ್ಪೆಷಲ್ ಎಫೆಕ್ಟ್ ಈ ಚಿತ್ರಕ್ಕಿದೆ. ಶ್ರೀಮೂಕಾಂಬಿಕಾ ಕಂಬೈನ್ಸ್ ಲಾಂಛನದಲ್ಲಿ ಎ. ವೆಂಕಟೇಶ್ ಕ್ಷತ್ರಿಯ ಚಿತ್ರವನ್ನು ನಿರ್ಮಿಸಿದ್ದಾರೆ.