ತಮಿಳುನಾಡಿನ ಸರ್ಕಾರವು ಅಲ್ಲಿನ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿರುವ ಹಿನ್ನೆಲೆ, ಕರ್ನಾಟಕದಲ್ಲೂ ಈ ನಿಯಮ ಅತೀ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇಂಥದ್ದೊಂದು ಸುದ್ದಿ ಬರುತ್ತಿದ್ದಂತೆಯೇ ದೊಡ್ಡ-ದೊಡ್ಡ ಚಿತ್ರಗಳೆಲ್ಲಾ ಬಿಡುಗಡೆಗೆ ನಾ ಮುಂದು ತಾ ಮುಂದು ಎನ್ನುತ್ತಿವೆ. ಈ ನಿಟ್ಟಿನಲ್ಲಿ ಸುದೀಪ್ ಅಭಿನಯದ 'ಕೋಟಿಗೊಬ್ಬ -3' ಚಿತ್ರವು ಏಪ್ರಿಲ್ 23ಕ್ಕೆ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಹಾಜರಾತಿಗೆ ಅನುಮತಿ ಸಿಕ್ಕ ನಂತರವಷ್ಟೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಹಲವರು ತೀರ್ಮಾನಿಸಿದ್ದರು. 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, 'ಕೋಟಿಗೊಬ್ಬ 3' ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಸೇರಿದಂತೆ ಹಲವರು, ಚಿತ್ರ ಸ್ವಲ್ಪ ತಡವಾದರೂ ಪರವಾಗಿಲ್ಲ, ಚಿತ್ರಮಂದಿರಗಳಲ್ಲಿ ಎಲ್ಲಾ ಆಸನಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದ ನಂತರವಷ್ಟೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಇದೀಗ, ಕರ್ನಾಟಕದಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಸಿಗುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸೂರಪ್ಪ ಬಾಬು ಅವರು ಏಪ್ರಿಲ್ 23ಕ್ಕೆ ತಮ್ಮ ಕೋಟಿಗೊಬ್ಬ-3 ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಈ ಚಿತ್ರವು ಪ್ರಾರಂಭವಾಗಿದ್ದು ಎರಡೂವರೆ ವರ್ಷಗಳ ಹಿಂದೆಯೇ. 2020ರ ಆರಂಭದಲ್ಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿತ್ತು. ಆದರೆ ಅಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹಾಗಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದ ಬಾಬು, ಇದೀಗ ಏಪ್ರಿಲ್ 23ರಂದು ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ. ಅದರ ಮರುದಿನವೇ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸುದೀಪ್ ಅವರ ಚಿತ್ರವೊಂದು ಬಿಡುಗಡೆಯಾಗುತ್ತಿರುವುದು ವಿಶೇಷ.
'ಕೋಟಿಗೊಬ್ಬ 3' ಚಿತ್ರದಲ್ಲಿ ಸುದೀಪ್ ಜೊತೆಗೆ ಮಡೋನಾ ಸೆಬಾಸ್ಟಿಯನ್, ರವಿಶಂಕರ್, ಅಫ್ತಾಬ್ ಶಿವದಾಸಾನಿ ಮುಂತಾದವರು ನಟಿಸಿದ್ದು, ಆಶಿಕಾ ರಂಗನಾಥ್ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದ್ದಾರೆ. ಶಿವಕಾರ್ತಿಕ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ಕೋಲ್ಕತ್ತಾದಲ್ಲಿ ಶೂಟಿಂಗ್ ನಡೆಸುತ್ತಿದ್ದ ಬ್ರಿಟಿಷ್ ನಟಿಗೆ ಕೊರೊನಾ!