ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ- 3 ಚಿತ್ರತಂಡಕ್ಕೆ ಮುಂಬೈ ಮೂಲದ ಏಜೆನ್ಸಿಯಿಂದ ಸಂಕಷ್ಟ ಎದುರಾಗಿದೆ. ಇತ್ತೀಚಿಗಷ್ಟೇ ಕೋಟಿಗೊಬ್ಬ 3 ಚಿತ್ರತಂಡ ಶೂಟಿಂಗ್ಗಾಗಿ ಪೋಲೆಂಡ್ಗೆ ತೆರಳಿತ್ತು. ಮುಂಬೈ ಮೂಲದ ಏಜೆನ್ಸಿ ಜೊತೆ 3 ಕೋಟಿ ರೂಪಾಯಿ ಹಣ ಕೊಡುವುದಾಗಿ ಪ್ಯಾಕೇಜ್ ಮಾತುಕತೆ ಮಾಡಿಕೊಂಡು ಚಿತ್ರತಂಡ ಪೋಲೆಂಡ್ಗೆ ಹಾರಿತ್ತು.
ಏಜೆನ್ಸಿ ಜೊತೆ ಒಪ್ಪಂದ ಮಾಡಿಕೊಂಡಂತೆ ಸೂರಪ್ಪ ಬಾಬು ಮುಂಬೈ ಏಜೆನ್ಸಿ ಮಾಲೀಕ ಸಂಜಯ್ ಪಾಲ್ಗೆ 3 ಕೋಟಿ ರೂಪಾಯಿ ಹಣ ಪಾವತಿಸಿದ್ದಾರೆ. ಆದರೆ ಈಗ ಏಜೆಂಟ್ ಸಂಜಯ್ ಪಾಲ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಚಿತ್ರ ನಿರ್ಮಾಪಕ ಹಾಗೂ ಮುಂಬೈ ಏಜೆನ್ಸಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪರಿಸ್ಥಿತಿ ಬಿಗಡಾಯಿಸಿದೆ. ಸದ್ಯ ಚಿತ್ರತಂಡ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದೆ. ಆದರೆ, ನಿರ್ಮಾಪಕ ಸೂರಪ್ಪ ಬಾಬು ಅವರ ಅಕೌಂಟೆಂಟ್ ಪೋಲೆಂಡ್ನಲ್ಲೇ ಇದ್ದಾರೆ. ಈಗ ಮುಂಬೈ ಮೂಲದ ಏಜೆನ್ಸಿ ಸೂರಪ್ಪ ಬಾಬು ಅವರ ಬಳಿ ಹೆಚ್ಚುವರಿಯಾಗಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಅಕೌಂಟೆಂಟನ್ನು ವಾಪಸ್ ಕಳಿಸದೇ ಹಾಗೂ ಶೂಟಿಂಗ್ ಮಾಡಿರುವ ಹಾರ್ಡ್ ಡಿಸ್ಕನ್ನೂ ಚಿತ್ರತಂಡಕ್ಕೆ ಕೊಡದೆ ಸತಾಯಿಸುತ್ತಿದೆ ಎನ್ನಲಾಗಿದೆ.
ಈ ಸಂಬಂಧ ನಿರ್ಮಾಪಕ ಸೂರಪ್ಪ ಬಾಬು ಮುಂಬೈ ಮೂಲದ ಏಜೆನ್ಸಿ ಮಾಲೀಕ ಸಂಜಯ್ ಪಾಲ್ ಹಾಗೂ ಆತನ ಸಹಾಯಕನ ವಿರುದ್ಧ ಬೆಂಗಳೂರು ಕಮಿಷನರ್ಗೆ ದೂರು ನೀಡಿದ್ದಾರೆ. ಅಲ್ಲದೇ ಚಿತ್ರತಂಡ ಕೇಂದ್ರ ಸಚಿವ ಸದಾನಂದ ಗೌಡ ಅವರ ಜೊತೆ ಕೂಡಾ ಮಾತುಕತೆ ನಡೆಸಿದ್ದು, ಭಾರತದ ರಾಯಭಾರಿ ಜೊತೆ ಮಾತನಾಡಿ ಅಕೌಂಟೆಂಟ್ನನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.