ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆ ಕೋಟಿಗೊಬ್ಬ 3 ತಂಡ ಪೋಲೆಂಡ್ಗೆ ಚಿತ್ರೀಕರಣಕ್ಕೆ ಹೋದಾಗ ಮುಂಬೈ ಮೂಲದ ಏಜೆಂಟ್ ಒಬ್ಬರು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಹೆಚ್ಚಿನ ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಈ ಚಿತ್ರತಂಡ ಮತ್ತೊಂದು ವಿವಾದದಲ್ಲಿ ಸಿಲುಕಿದೆ.
ಯೂಟ್ಯೂಬ್ನಿಂದ ‘ಕೋಟಿಗೊಬ್ಬ 3’ ಟೀಸರ್ ಕಾಣೆ ಆಗಿದೆ. ಈ ಸಮಸ್ಯೆ ಉದ್ಭವವಾಗಿದ್ದೇ ಪೋಲೆಂಡ್ ಚಿತ್ರೀಕರಣದ ವೇಳೆ. ಮುಂಬೈನ ವೈಬ್ರಂಟ್ ಲಿಮಿಟೆಡ್ ಸಂಸ್ಥೆಯ ಸಂಜಯ್ ಕುಮಾರ್ ಪಾಲ್ ಎಂಬುವರೊಂದಿಗೆ ಚಿತ್ರೀಕರಣಕ್ಕೆ ಅನುಮತಿ ದೊರಕಿಸಿ ಕೊಡಲು ಹಣದ ಒಪ್ಪಂದ ಮಾಡಿಕೊಂಡಿತ್ತು ಎನ್ನಲಾಗಿದ್ದು, ಆ ಸಂಸ್ಥೆಗೆ ಸಲ್ಲಬೇಕಾದ ಸುಮಾರು 88 ಲಕ್ಷ ರೂಪಾಯಿ ಹಣ ಸಂದಾಯವಾಗಿಲ್ಲ. ಈ ಕಾರಣದಿಂದ ಸಂಜಯ್ ಕುಮಾರ್ ಪಾಲ್ ಯೂಟ್ಯೂಬ್ ಸಂಸ್ಥೆಗೆ ಕಾಪಿ ರೈಟ್ ಆ್ಯಕ್ಟ್ ಅಡಿ 'ಕೋಟಿಗೊಬ್ಬ-3' ಚಿತ್ರದ ಟೀಸರ್ ತೆಗೆದು ಹಾಕಲು ಸೂಚಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್ ‘ಮಾನವ ಕುಲ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಮುಂದೆ ಇದೇನು ಅಲ್ಲವೇ ಅಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು ಇದು ಹಣಕ್ಕಾಗಿ ನಡೆಸುತ್ತಿರುವ ಸಂಚು ಎಂದು ಆರೋಪಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಸೂರಪ್ಪ ಬಾಬು ಹೇಳಿದ್ದಾರೆ. ಶೀಘ್ರವೇ ಯೂಟ್ಯೂಬ್ನಲ್ಲಿ ಕೋಟಿಗೊಬ್ಬ 3 ಟೀಸರ್ ಬಿಡುಗಡೆ ಮಾಡುವುದಾಗಿ ಕೂಡಾ ಸೂರಪ್ಪ ಬಾಬು ಹೇಳಿದ್ದಾರೆ.