'ಅಭಿಮಾನಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಕೊಡಗಿನ ಹುಡುಗಿ ನಿಧಿ ಸುಬ್ಬಯ್ಯ, 'ನನ್ನ ನಿನ್ನ ಪ್ರೇಮಕಥೆ' ಸಿನಿಮಾ ನಂತರ ಬಾಲಿವುಡ್ಗೆ ಹಾರಿದರು. ಅಲ್ಲಿಂದ ಈಚೆಗೆ ಅವರು ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ಅವರು 'ಆಯುಷ್ಮಾನ್ಭವ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ವುಡ್ಗೆ ವಾಪಸಾಗಿದ್ದಾರೆ.
ಮೂರು ವರ್ಷಗಳ ನಂತರ ಮತ್ತೆ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಆದ ನಿಧಿ ಈಗ ಮತ್ತೆ ಚಂದನವನದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇನ್ನು ಮುಂದೆ ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. 'ಆಯುಷ್ಮಾನ್ಭವ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಧಿ ಸುಬ್ಬಯ್ಯ ಬಹಳ ದಿನಗಳ ನಂತರ ಕನ್ನಡಕ್ಕೆ ವಾಪಸ್ ಬಂದಿದ್ದು ತವರು ಮನೆಗೆ ಬಂದಷ್ಟೇ ಖುಷಿಯಾಗ್ತಿದೆ. ನಾನು ಸಿನಿಮಾದ ಅಕ್ಷರಮಾಲೆ ಕಲಿತಿದ್ದು ಕನ್ನಡ ಚಿತ್ರರಂಗದಲ್ಲೇ. ಜೀವನ ಎಂಬುದು ಒಂದು ಜರ್ನಿ ರೀತಿ, ಅದೇ ರೀತಿ ಸಿನಿಮಾ ಕೂಡಾ ಒಂದು ಜರ್ನಿ. ನನ್ನ ಜೀವನದಲ್ಲಿ ಕೆಲವು ಏಳು-ಬೀಳುಗಳನ್ನು ಕಂಡ ಬಳಿಕ ಮತ್ತೆ ಸ್ಯಾಂಡಲ್ವುಡ್ ಕಡೆಗೆ ವಾಪಸಾಗಿದ್ದೇನೆ. 'ಆಯುಷ್ಮಾನ್ಭವ' ಬಿಡುಗಡೆಯಾಗುವವರೆಗೂ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೇನೆ. ಕನ್ನಡಿಗರು ನನ್ನನ್ನು ಮರೆತಿದ್ದಾರೆ. ಈ ಸಿನಿಮಾ ಮೂಲಕ ಕನ್ನಡಿಗರು ಮತ್ತೆ ನನ್ನನ್ನು ಗುರುತಿಸುತ್ತಾರೆ. ಬೇರೆ ಭಾಷೆಗಳಲ್ಲಿ ನನ್ನ ವೆಬ್ ಸೀರೀಸ್ ಶೂಟಿಂಗ್ ನಡೆಯುತ್ತಲೇ ಇದೆ ಎಂದು ತಮ್ಮ ಈ ಮೂರು ವರ್ಷದ ಜರ್ನಿ ಅನುಭವ ಹಂಚಿಕೊಂಡರು ನಿಧಿ ಸುಬ್ಬಯ್ಯ.