ಸದಾ ಹೊಸ ರಾಗ, ಹೊಸ ಚಿಂತನೆಯಲ್ಲಿ ತೊಡಗಿರುವ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಈಗ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡದಲ್ಲಿ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾದಲ್ಲಿ ಎಲ್ಲ ಹಾಡುಗಳಿಗೆ ಮಾಧುರ್ಯ ತುಂಬಿಕೊಟ್ಟಿದ್ದ ಕಿರಣ್ ರವೀಂದ್ರನಾಥ್ ಈಗ ಲಾಕ್‌ಡೌನ್ ಸಂದರ್ಭದಲ್ಲಿ ಒಂದು ಹಿಂದಿ ಭಾಷೆಯ ಗೀತೆಯನ್ನು ಸ್ವತಃ ಹಾಡಿದ್ದಾರೆ ಹಾಗೂ ರಾಗ ಸಂಯೋಜನೆ ಸಹ ಮಾಡಿದ್ದಾರೆ.
'ಚಹಾ ಥಾ ಕ್ಯಾ ಹಮ್ ನೇ' ಹಾಡಿಗೆ ಎಲ್ಲ ವಾದ್ಯಗಳನ್ನು ಕಿರಣ್ ರವೀಂದ್ರನಾಥ್ ನುಡಿಸಿದ್ದಾರೆ ಮತ್ತು ಅವರ ಧ್ವನಿಯಲ್ಲಿ ಕೆ ಆರ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಇವರ ಸ್ನೇಹಿತ ಗಿಟಾರ್ ವಾದ್ಯಗಾರ ಹಾಗೂ ಸಿವಿಲ್ ಇಂಜಿನಿಯರ್ ಆಗಿರುವ ಹಮೀದ್ ಹಾಸನ್, ಈ ಹಿಂದಿ ಹಾಡನ್ನು ರಚಿಸಿದ್ದಾರೆ. ಈ ಹಾಡು ಕೆಲವು ದಿನಗಳ ಹಿಂದೆಯಷ್ಟೇ ಯುಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
3 ನಿಮಿಷ 25 ಸೆಕಂಡ್ ಅವಧಿಯ ಈ ವಿಡಿಯೋ ಹಾಡನ್ನು ರೆಕಾರ್ಡ್ ಮಾಡಿ ಕಿಬೋರ್ಡ್, ರಿದಮ್ ಪ್ರೋಗ್ರಾಮ್ ಸಹ ಕಿರಣ್ ರವೀಂದ್ರನಾಥ್ ಮಾಡಿದ್ದಾರೆ. ವರುಣ್ ಪ್ರದೀಪ್ ಮಾಸ್ಟರಿಂಗ್ ಮಾಡಿ, ಗಣೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ.
ಕೋರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಆದ ಸಮಯದಲ್ಲಿ ಸಂಗೀತ ಅಭ್ಯಾಸ, ರಾಗಗಳ ಬ್ಯಾಂಕ್ ಸಹ ಸಿದ್ದ ಮಾಡಿಕೊಂಡಿರುವ ಕಿರಣ್ ರವೀಂದ್ರನಾಥ್ ಸಂಕಲನದ ಬಗ್ಗೆ ಸಹ ತಿಳುವಳಿಕೆ ಬೆಳೆಸಿಕೊಂಡಿದ್ದಾರೆ.