ಚಿತ್ರರಂಗದಂತೆ ಕಿರುತೆರೆ ಉದ್ಯಮ ಕೂಡಾ ಬಹಳ ನಷ್ಟದಲ್ಲಿದೆ. ಬಹುತೇಕ ಎಲ್ಲಾ ವಾಹಿನಿಗಳು ಕೆಲವೊಂದು ಧಾರಾವಾಹಿಗಳ ಪ್ರಸಾರವನ್ನು ನಿಲ್ಲಿಸಿ ಹಳೆಯ ಧಾರಾವಾಹಿಗಳು, ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿವೆ.
ಅಶ್ವಿನಿ ನಕ್ಷತ್ರ, ರಾಧಾ ರಮಣ, ಪದ್ಮಾವತಿಯಂತ ಹಳೆ ಧಾರಾವಾಹಿಗಳು ಆಗಲೇ ಮರುಪ್ರಸಾರ ಆರಂಭಿಸಿವೆ. ಇದೀಗ ನಿಮ್ಮನ್ನು ರಂಜಿಸಲು 'ಕಿನ್ನರಿ' ಮತ್ತೆ ನಿಮ್ಮ ಮನೆಗೆ ಬರುತ್ತಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಇನ್ನುಮುಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬರಲಿದ್ದಾಳೆ. ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8.30ಕ್ಕೆ ಕಿನ್ನರಿ ಪ್ರಸಾರವಾಗಲಿದೆ. ಇದು ನಾಯಕಿ ಪ್ರಧಾನ ಧಾರಾವಾಹಿ.
ಪುಟ್ಟ ಹುಡುಗಿ ಮಣಿ ತಾಯಿ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಾಳೆ. ತಾಯಿ ನಿಧನದ ನಂತರ ಮಣಿ ತಂದೆ ಹಾಗೂ ಮಲತಾಯಿಯೊಂದಿಗೆ ಜೀವನ ನಡೆಸಲು ಹೋಗುತ್ತಾಳೆ. ಆ ಸಮಯದಲ್ಲಿ ಪುಟ್ಟ ಹುಡುಗಿ ಏನೆಲ್ಲಾ ಅನುಭವಿಸುತ್ತಾಳೆ. ಆ ಕಷ್ಟದಿಂದ ಹೇಗೆ ಹೊರ ಬರುತ್ತಾಳೆ ಎಂಬುದೇ ಮಣಿ ಧಾರಾವಾಹಿಯ ಕಥೆ.
ಸುಮಾರು 6 ವರ್ಷಗಳ ಕಾಲ ಜನರನ್ನು ರಂಜಿಸಿದ 'ಕಿನ್ನರಿ' ಕಳೆದ ವರ್ಷವಷ್ಟೇ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿತ್ತು. ಮಣಿಯ ಬಾಲ್ಯದ ಪಾತ್ರದಲ್ಲಿ ದಿಶಾ ರಾಮ್ ನಟಿಸಿದ್ದಾರೆ. ಉಳಿದಂತೆ ಭೂಮಿ ಶೆಟ್ಟಿ, ಕಿರಣ್ ರಾಜ್, ಪವನ್ ಕುಮಾರ್, ಸಾಗರ್ ಬಿಳಿಗೌಡ, ಸುಂದರಶ್ರೀ, ಲಲಿತಾಂಜಲಿ, ಜ್ಯೋತಿ ರೈ, ರೋಷ್ನಿ ತೆಲ್ಕರ್ ಹಾಗೂ ಇನ್ನಿತರರು ನಟಿಸಿದ್ದಾರೆ.