ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ಪ್ರಜ್ವಲ್ ದೇವರಾಜ್ ತಮ್ಮ ಪತ್ನಿ ರಾಗಿಣಿ ಚಂದ್ರನ್ ಅವರನ್ನು ಕೂಡಾ 'ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ.
ಚಿತ್ರರಂಗದಲ್ಲಿ ಎಲ್ಲರೊಂದಿಗೆ ಆತ್ಮೀಯರಾಗಿರುವ ಪ್ರಜ್ವಲ್ ಮೇಲೆ ಅವರ ಸ್ನೇಹಿತರ ಮಕ್ಕಳೇ ಅಟ್ಯಾಕ್ ಮಾಡಿದ್ದಾರೆ. ಇದೇನಪ್ಪಾ ಏನಾಯ್ತು ಅಂತ ಗಾಬರಿಯಾಗಬೇಡಿ. ಪ್ರಜ್ವಲ್ಗೆ ಚಿರಂಜೀವಿ ಸರ್ಜಾ, ಪನ್ನಗಾಭರಣ ಸೇರಿ ಚಿತ್ರರಂಗದಲ್ಲಿ ಅನೇಕ ಆತ್ಮೀಯ ಸ್ನೇಹಿತರಿದ್ದಾರೆ. ಗೆಳೆಯ ಚಿರು ಅಗಲಿಕೆಯನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಇನ್ನು ಸೋಮವಾರ ಚಿರು ಮೊದಲ ತಿಂಗಳ ಪುಣ್ಯತಿಥಿ ಕಾರ್ಯ ನೆರವೇರಿತ್ತು. ಈ ಕಾರ್ಯಕ್ಕೆ ಚಿರು ಎಲ್ಲಾ ಗೆಳೆಯರು ಹಾಜರಾಗಿದ್ದರು. ಮಕ್ಕಳೊಂದಿಗೆ ಆಟವಾಡುತ್ತಾ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ ಪ್ರಜ್ವಲ್. ಪನ್ನಗಾಭರಣ ಹಾಗೂ ಮತ್ತೊಬ್ಬ ಗೆಳೆಯನ ಪುತ್ರನೊಂದಿಗೆ ಪ್ರಜ್ವಲ್ ಆಟವಾಡಿದ್ದಾರೆ. ಈ ವೇಳೆ ಆ ಮಕ್ಕಳು ಪ್ರಜ್ವಲ್ ಮೇಲೆ ಬಿದ್ದು ಅವರ ಬಟ್ಟೆಯನ್ನು ಎಳೆದಾಡಿದ್ದಾರೆ. ಈ ಕ್ಷಣವನ್ನು ಪ್ರಜ್ವಲ್ ಬಹಳ ಎಂಜಾಯ್ ಮಾಡಿದ್ದಾರೆ. ಸ್ನೇಹಿತರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.