ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಮಹತ್ವದ ಘೋಷಣೆ ಹೊರಹಾಕಿದೆ. ಇದರಿಂದ ಕಿಚ್ಚನ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಣೆ ಮಾಡಿತ್ತು. ‘ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗು ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು, ಪ್ರಪಂಚಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ. ನಿಮ್ಮ ಪ್ರೀತಿ ಹಾಗು ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ, ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎನ್ನುವ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ’ ಎಂದಿದ್ದಾರೆ ಜಾಕ್ ಮಂಜು.
ಇದನ್ನೂ ಓದಿರಿ: ಪುನೀತ್ ಪಿಆರ್ಕೆ ಬ್ಯಾನರ್ನ "ಒನ್ ಕಟ್ ಟು ಕಟ್" ಸಿನಿಮಾದ ಟ್ರೈಲರ್ ಬಿಡುಗಡೆ
ಕೋವಿಡ್ ಪರಿಸ್ಥಿತಿ ಹಾಗೂ ಕೋವಿಡ್ ಮಾರ್ಗಸೂಚಿ ನಿಯಮಗಳಿಂದಾಗಿ ದೇಶಾದ್ಯಂತ ಸಿನಿಮಾ ತಲುಪಿಸಲು ಸಾಧ್ಯವಾಗುವುದಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಅನೇಕ ಬಹುನಿರೀಕ್ಷಿತ ಸಿನಿಮಾಗಳು ಮುಂದೂಡಿಕೆಯಾಗಿದ್ದು, ಆ ಸಾಲಿಗೆ ಇದೀಗ ಕನ್ನಡದ ವಿಕ್ರಾಂತ್ ರೋಣ ಸಹ ಸೇರಿಕೊಂಡಿದೆ.
ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ, ವಿಕ್ರಾಂತ್ ರೋಣ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಶ್ರಾದ್ಧಾ ಶ್ರೀನಾಥ್, ಹೀಗೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ. ನಿರ್ಮಾಪಕ ಜಾಕ್ ಮಂಜು ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 14 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ