7 ತಿಂಗಳ ನಂತರ ಅಕ್ಟೋಬರ್ 15 ರಿಂದ ಮತ್ತೆ ಚಿತ್ರಮಂದಿರಗಳು ಕಾರ್ಯ ಆರಂಭಿಸಿವೆ. ಹೊಸದಾಗಿ ಯಾವ ಸಿನಿಮಾಗಳು ಬಿಡುಗಡೆಯಾಗದಿದ್ದರೂ ಲಾಕ್ಡೌನ್ಗೂ ಮುನ್ನ ಬಿಡುಗಡೆಯಾಗಿ ಕೆಲವು ದಿನಗಳ ಕಾಲ ಪ್ರದರ್ಶನ ಕಂಡಿದ್ದ ಚಿತ್ರಗಳು ಮತ್ತೆ ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ 'ದಿಯಾ' ಸಿನಿಮಾ ಕೂಡಾ ಒಂದು.
ಪ್ರೇಮಕಥೆಯನ್ನು ಹೊಂದಿರುವ 'ದಿಯಾ' ಹೊಸ ಕ್ಲೈಮಾಕ್ಸ್ ಹಾಗೂ ಹೊಸ ಹಾಡಿನೊಂದಿಗೆ ನವೆಂಬರ್ 6 ರಂದು ಮಲ್ಟಿಪ್ಲೆಕ್ಸ್ನಲ್ಲಿ ಮತ್ತೆ ಬಿಡುಗಡೆಯಾಗಿದೆ. ಲಾಕ್ಡೌನ್ ಸಮಯದಲ್ಲಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಈ ಚಿತ್ರವನ್ನು ನೋಡಿದ ಸಿನಿಪ್ರಿಯರಿಗೆ ಮತ್ತೆ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಒಲಿದು ಬಂದಿದೆ. ಖುಷಿ ರವಿ, ಪೃಥ್ವಿ ಅಂಬರ್ ಹಾಗೂ ದೀಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿನ್ನೆಯಷ್ಟೇ ದೀಕ್ಷಿತ್ ಶೆಟ್ಟಿ ಹಾಗೂ ಪೃಥ್ವಿ ಅಂಬರ್ ಮಾತನಾಡಿ ತಮ್ಮ ಸಿನಿಮಾ ರೀ ರಿಲೀಸ್ ಆಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದರು.
ಚಿತ್ರದ ನಾಯಕಿ ಖುಷಿ ರವಿ ಕೂಡಾ ಮಾತನಾಡಿ, ಅಭಿಮಾನಿಗಳಿಗೆ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ. ''ದಿಯಾ ಸಿನಿಮಾದಲ್ಲಿ ಕ್ಲೈಮಾಕ್ಸ್ ಬದಲಾಗಿದೆ. ಅಲ್ಲದೆ ಹೊಸ ಹಾಡೊಂದನ್ನು ಸೇರಿಸಲಾಗಿದೆ. ಈ ವೀಕೆಂಡ್ನಲ್ಲಿ ನಿಮ್ಮ ಕುಟುಂಬದೊಂದಿಗೆ ಸುರಕ್ಷಿತವಾಗಿ ಬಂದು ಸಿನಿಮಾ ನೋಡಿ ನಮ್ಮನ್ನು ಪ್ರೋತ್ಸಾಹಿಸಿ'' ಎಂದು ಖುಷಿ ರವಿ ಮನವಿ ಮಾಡಿದ್ದಾರೆ.