ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಚಿತ್ರಗಳ ಬಿಡುಗಡೆ ದಿನಾಂಕ ಹೊರಬೀಳುತ್ತಿದೆ. ಈಗಾಗಲೇ ರಜನಿಕಾಂತ್ ಅಭಿನಯದ ಅಣ್ಣಾತೆ, ಪ್ರಭಾಸ್ ಅಭಿನಯದ ರಾಧೇ ಶ್ಯಾಮ್, ಮಹೇಶ್‌ಬಾಬು ಅಭಿನಯದ ಸರ್ಕಾರು ವಾರಿ ಪಾಟ ಮುಂತಾದ ಚಿತ್ರಗಳ ಬಿಡುಗಡೆಯ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಆದರೆ, ಕನ್ನಡದ ಕೆಜಿಎಫ್-2 ಚಿತ್ರದ ಬಿಡುಗಡೆ ಯಾವಾಗ ಎಂಬ ರಹಸ್ಯವನ್ನು ಚಿತ್ರತಂಡದವರು ಬಿಟ್ಟುಕೊಡುತ್ತಿಲ್ಲ.
ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಕೆಜಿಎಫ್ 2 ಚಿತ್ರ ಜುಲೈ 16ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಇನ್ನೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ, ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ. ಆದರೆ, ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರತಂಡ ಇಷ್ಟರಲ್ಲಿ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಬೇಕಿತ್ತು.
ಮೂಲಗಳ ಪ್ರಕಾರ, ಯಶ್ ಅವರ ಫೇವರೆಟ್ ವಾರ ಎಂದೇ ಪರಿಗಣಿಸಲಾಗಿರುವ ಡಿಸೆಂಬರ್ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಯಾರೂ ಆ ಸಮಯದಲ್ಲಿ ಬಿಡುಗಡೆ ಘೋಷಿಸಿಲ್ಲವಾದ್ದರಿಂದ ಕೆಜಿಎಫ್ 2 ಚಿತ್ರವು ಡಿಸೆಂಬರ್ 24 ಅಥವಾ 31ಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿದೆ.
ಕೆಜಿಎಫ್ 2 ಚಿತ್ರವು ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾದರೆ, ರಕ್ಷಿತ್ ಏನು ಮಾಡುತ್ತಾರೆ ಎಂಬ ಪ್ರಶ್ನೆ ಸಹಜವೇ. ಏಕೆಂದರೆ, ರಕ್ಷಿತ್ಗೂ ಸಹ ಡಿಸೆಂಬರ್ ಕೊನೆಯ ವಾರ ಲಕ್ಕಿ. ಈ ಹಿಂದೆ ಕಿರಿಕ್ ಪಾರ್ಟಿ ಅದೇ ಸಮಯದಲ್ಲಿ ಬಿಡುಗುಡೆಯಾಗಿ ಸೂಪರ್ ಹಿಟ್ ಆಗಿತ್ತು.
ಇದನ್ನೂ ಓದಿ : ಪವರ್ ಸ್ಟಾರ್ ಜೊತೆ ಮತ್ತೆ ರೊಮ್ಯಾನ್ಸ್ ಮಾಡಲಿದ್ದಾರೆ ಸೌತ್ ಸುಂದರಿ ತ್ರಿಶಾ
ಈ ವರ್ಷದ ಕೊನೆಗೆ ಸಪ್ತ ಸಾಗರದಾಚೆ ಎಲ್ಲೋ ಬಿಡುಗಡೆಯಾಗಲಿದೆ ಎಂದು ರಕ್ಷಿತ್ ಈಗಾಗಲೇ ಘೋಷಿಸಿದ್ದಾರೆ. ಆದರೆ, ಅದಕ್ಕೂ ಮೊದಲು 777 ಚಾರ್ಲಿ ಬಿಡುಗಡೆಯಾಗಬೇಕಿದ್ದು, ಬಹುಶಃ ಡಿಸೆಂಬರ್ ಕೊನೆಯ ವಾರಕ್ಕೆ ಸಪ್ತ ಸಾಗರದಾಚೆ ಎಲ್ಲೋ ಬದಲು, 777 ಚಾರ್ಲಿ ಚಿತ್ರವೇ ಬಿಡುಗಡೆಯಾಗಬಹುದು.
ಹೀಗೆ ಡಿಸೆಂಬರ್ ಕೊನೆಯ ವಾರಕ್ಕೆ ಎರಡರೆಡು ನಿರೀಕ್ಷಿತ ಚಿತ್ರಗಳಿವೆ. ಈ ಎರಡರ ಪೈಕಿ ಯಾವ ಚಿತ್ರ ಬರುತ್ತದೆ ಎಂಬ ಕುತೂಹಲಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.