ಕನ್ನಡ ಚಿತ್ರರಂಗದ ದೊಡ್ಮನೆ ರಾಜಕುಮಾರನಾಗಿದ್ದವರು ಒನ್ ಅಂಡ್ ಒನ್ಲೀ ಪುನೀತ್ ರಾಜ್‍ಕುಮಾರ್. ಅಪ್ಪು ಅಂದಾಕ್ಷಣ ಅದ್ಭುತ ವ್ಯಕ್ತಿತ್ವ, ಸರಳತೆ ಹಾಗೂ ವಿನಯವಂತಿಕೆ ನೆನಪಾಗುತ್ತದೆ. ಮುಗ್ಧ ನಗುವಿನಿಂದಲೇ ಕನ್ನಡಿಗರ ಹೃದಯದಲ್ಲಿ ರಾರಾಜಿಸುತ್ತಿದ್ದ ಕರ್ನಾಟಕದ ಈ ಅಮೂಲ್ಯ ರತ್ನ ಎಂದೆಂದಿಗೂ ಅಮರರಾಗಿರುತ್ತಾರೆ. ಪುನೀತ್ ಅವರು ಸದ್ದಿಲ್ಲದೇ ಮಾಡಿರುವ ಸಮಾಜ ಸೇವೆಯ ಬಗ್ಗೆ ತಿಳಿದ ಕನ್ನಡಿಗರು ಭಾವುಕರಾಗಿದ್ದಾರೆ.
46 ವರ್ಷ ಸಿನಿಮಾರಂಗದಲ್ಲಿಯೇ ಕಳೆದ ಪುನೀತ್ರವರ ಸಾಧನೆ, ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದ ನಟ. ಅಪ್ಪನಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದು ಕಣ್ಮರೆಯಾಗಿರುವ ಕನ್ನಡಿಗರ ಪಾಲಿನ ಕರ್ನಾಟಕ ರತ್ನನ ಅಮೋಘ ಸಿನಿ ಪಯಣವನ್ನು ಜೀ ಕನ್ನಡ ವಾಹಿನಿ ಅತ್ಯಂತ ಗೌರವದಿಂದ ಸೆಲೆಬ್ರೆಟ್ ಮಾಡಿದೆ.
ಈ ಜರ್ನಿಯಲ್ಲಿ ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬದ ಅನೇಕರು ಉಪಸ್ಥಿತರಿದ್ದರು. ಕರುನಾಡ ರತ್ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಜ್‌ಕುಮಾರ್ ಕುಟುಂಬವಷ್ಟೇ ಅಲ್ಲದೇ ಚಿತ್ರರಂಗದ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿದ್ದರು. ಈ ವೇಳೆ ವೇದಿಕೆ ಮೇಲೆ ಶಿವರಾಜ್‌ಕುಮಾರ್ ಬಾಲನಟನಾಗಿ ಅಪ್ಪು ನಟಿಸಿ, ಹಾಡಿದ್ದ ಬಾನ ದಾರಿಯಲ್ಲಿ.. ಹಾಡನ್ನು ಹಾಡಿದ್ದಷ್ಟೇ ಅಲ್ಲದೆ ಪುನೀತ್ ಇಷ್ಟ ಪಟ್ಟು ಹಾಡುತ್ತಿದ್ದ ಬಾಬಿ ಸಿನಿಮಾದ 'ಮೇ ಶಾಯರ್ ತೋ ನಹಿ' ಹಾಡನ್ನು ಕೂಡ ಹಾಡಿದ್ದಾರೆ.
ಇದನ್ನೂ ಓದಿರಿ: ಭುವನ ಸುಂದರಿ ಪಟ್ಟ ಗೆದ್ದು ತವರಿಗೆ ಬಂದ ಮಿಸ್ ಯುನಿವರ್ಸ್ 'ಸಂಧು'... ಅದ್ಧೂರಿ ಸ್ವಾಗತ
ಇನ್ನು, ಪ್ರೀತಿಯ ಅಪ್ಪುಗಾಗಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ರಚಿಸಿದ ಹಾಡು 'ಪ್ರೀತಿಯ ಪವರ್‌ಸ್ಟಾರ್' ಪುನೀತ್ ರಾಜಕುಮಾರ್ ಜೀವನದ ಮೌಲ್ಯಗಳು, ಸಾಧನೆ, ಅಪೂರ್ವ ಸಂದೇಶದ ಜೊತೆಗೆ ಅವರ ಅಮೂಲ್ಯ ನೆನಪುಗಳನ್ನು 'ಕರುನಾಡ ರತ್ನ' ಕಾರ್ಯಕ್ರಮ ಅನಾವರಣಗೊಳಿಸಲಿದೆ. ಆ ಹಾಡನ್ನು ದೊಡ್ಮನೆ ಕುಟುಂಬದ ಸಮ್ಮುಖದಲ್ಲೇ ಹಾಡಿ, ಹೆಜ್ಜೆ ಹಾಕಲಾಗಿದೆ. ನಾದಬ್ರಹ್ಮ ಹಂಸಲೇಖ ಕೂಡ ಈ ಕಾರ್ಯಕ್ರಮಕ್ಕಾಗಿ ಒಂದು ಟ್ಯೂನ್ ಹಾಕಿ ಸಾಹಿತ್ಯ ರಚಿಸಿದ್ದರು. ಆ ಹಾಡಿಗೂ 'ಕರುನಾಡ ರತ್ನ' ವೇದಿಕೆ ಸಾಕ್ಷಿಯಾಗಿದೆ. ಸರಿಗಮಪ ಪ್ರತಿಭೆ ಕಂಬದ ರಂಗಯ್ಯ ಮಹಾಗುರು ಹಂಸಲೇಖ ಅವರು ಸಂಯೋಜಿಸಿದ ಟ್ಯೂನ್‌ಗೆ ಧ್ವನಿಯಾಗಿದ್ದಾರೆ. ಇದು ಈ ಕಾರ್ಯಕ್ರಮದ ಹೈಲೈಟ್‌ಗಳಲ್ಲೊಂದು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜರ್ನಿಯನ್ನು ಅದ್ದೂರಿಯಾಗಿ,ಅವರ ನೆನಪುಗಳನ್ನು ಶ್ರೀಮಂತವಾಗಿಸಲು ಜೀ ಕನ್ನಡ ವಾಹಿನಿ, ವರುಣ್ ಸ್ಟುಡಿಯೋಸ್ ಹಾಗೂ GKGS ಟ್ರಸ್ಟ್ ಸಾಕಷ್ಟು ಶ್ರಮವಹಿಸಿದೆ. ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಇದೇ ಡಿಸೆಂಬರ್ 19, ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.