ಎರಡು ತಿಂಗಳ ನಂತರ ಚಿತ್ರೇತರ ಚಟುವಟಿಕೆಗಳು ಪ್ರಾರಂಭ ಮಾಡಬಹುದು ಎಂಬ ಆಜ್ಞೆ ಪಾಲಿಸಿ ಕೆಲಸ ಏನೋ ಶುರು ಆಗಿದೆ. ಆದರೆ ವ್ಯವಹಾರ ಎಂದಿನಂತಾಗಬೇಕು ಎಂದರೆ ಬಹಳಷ್ಟು ಕಾಲ ಬೇಕು ಎಂದು ಸ್ಟುಡಿಯೋ ಮಾಲೀಕ (ಬಾಲಾಜಿ ಡಿಜಿಟಲ್ ಸ್ಟುಡಿಯೋ) ಹಾಗೂ ನಟ ಕರಿ ಸುಬ್ಬು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಪೊಸ್ಟ್ ಪ್ರೋಡಕ್ಷನ್ ವರ್ಕ್ಸ್ ಮುಗಿಸಿರುವ ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ನಿರ್ಮಾಪಕರು ಮಾತ್ರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ದುಡ್ಡು ನೀಡುವುದಾಗಿ ಹೇಳುತ್ತಾರೆ. ಆದರೆ ಕೆಲಸಗಾರರಿಗೆ, ವಿದ್ಯುತ್ ಬಿಲ್, ಬಾಡಿಗೆ ನೀಡಬೇಕು ಅಂದ್ರೆ ಕನಿಷ್ಠ 8 ಲಕ್ಷ ಬೇಕು. ಲಾಕ್ಡೌನ್ನಿಂದಾಗಿ ಕಳೆದ 3 ತಿಂಗಳಿನಿಂದ ಯಾವುದೇ ವ್ಯಾಪಾರವಾಗಿಲ್ಲ.
ಈಗಾಗಲೇ ಮಾರ್ಚ್ ತಿಂಗಳ ಬಿಲ್ ಕ್ಲೀಯರ್ ಆಗಿದೆ. ಏಪ್ರಿಲ್ ತಿಂಗಳಿಗೆ ಅರ್ಧ ಚುಕ್ತಾ ಮಾಡಲಾಗಿದೆ. ಮೇ ತಿಂಗಳ ಸಂಬಳ, ಸ್ಟುಡಿಯೋ ಖರ್ಚು ವೆಚ್ಚಕ್ಕೆ ದುಡ್ಡಿಲ್ಲ ಎನ್ನುತ್ತಿದ್ದಾರೆ ಕರಿ ಸುಬ್ಬು. ಇದೇ ಪರಿಸ್ಥಿತಿ ಮಿಕ್ಕ ಎಲ್ಲಾ ಸ್ಟುಡಿಯೋಗಳು ಸಹ ಅನುಭವಿಸುತ್ತಿವೆ.
ಬಾಲಾಜಿ ಡಿಜಿಟಲ್ ಸ್ಟುಡಿಯೋ ಕಳೆದ 14 ವರ್ಷಗಳಿಂದ 700ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಚಿತ್ರೇತರ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಜೊತೆಗೆ ಇನ್ನಷ್ಟು ಜನಪ್ರಿಯ ಸ್ಟುಡಿಯೋಗಳು ಅಂದರೆ ಚಾಮುಂಡೇಶ್ವರಿ ಸ್ಟುಡಿಯೋ, ಆಕಾಶ್ ಸ್ಟುಡಿಯೋ, ಮಂಜರಿ ಸ್ಟುಡಿಯೋ, ರೇಣು ಸ್ಟುಡಿಯೋ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರ ಓಂ ಸಾಯಿ ಡಿಜಿಟಲ್ ಸ್ಟುಡಿಯೋ, ವಿಜಯ ಸ್ಟುಡಿಯೋ, ಸಾಧು ಕೋಕಿಲ ಅವರ ಬಿನ್ ಲೂಪ್ ಸ್ಟುಡಿಯೋ ಅಲ್ಲದೆ 40ಕ್ಕೂ ಹೆಚ್ಚು ಸ್ಟುಡಿಯೋಗಳು ಬೆಂಗಳೂರು ಸುತ್ತಮುತ್ತ ಕೆಲಸ ನಿರ್ವಹಿಸುತ್ತಿವೆ. ಎಲ್ಲಾ ಸ್ಟುಡಿಯೋಗಳು ಈಗ ಪ್ಯಾಕೇಜ್ನಲ್ಲಿ ಕೆಲಸ ನಿರ್ವಹಿಸುತ್ತಿವೆ.
ಸುಮಾರು 60 ಕನ್ನಡ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಮುಗಿಸಿರುವ ಬಾಲಾಜಿ ಸ್ಟುಡಿಯೋದಲ್ಲಿ ನಟ ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್, ಲಾ, ಫ್ರೆಂಚ್ ಬಿರ್ಯಾನಿ, ಡೀಲ್ ಸತ್ಯ, ದೃವ ಸರ್ಜಾರ ಪೊಗರು, ದರ್ಶನ್ರ ರಾಬರ್ಟ್ ಕೆಲಸಗಳು ಸದ್ಯಕ್ಕೆ ನಡೆಯುತ್ತಿವೆ. ಅಲ್ಲದೆ ಪುನೀತ್ ರಾಜ್ಕುಮಾರ್ ಅವರ ಯುವರತ್ನ, ಯೋಗರಾಜ್ ಭಟ್ಟರ ಗಾಳಿಪಟ 2 ಸಿನಿಮಾಗಳು ಆಕಾಶ್ ಸ್ಟುಡಿಯೋದಲ್ಲಿ, ಕೋಟಿಗೊಬ್ಬ-3 ಸಿನಿಮಾದ ಕೆಲಸ ಚಾಮರಾಜ ಪೇಟೆಯ ವಿಜಯ್ ಸ್ಟುಡಿಯೋದಲ್ಲಿ ಮಾಡಲಾಗುತ್ತಿದೆ.
ಸದ್ಯದ ಪರಿಸ್ಥಿತಿಗೆ ಮದ್ದು ಅಂದ್ರೆ ಸಿನಿಮಾಗಳು ಬಿಡುಗಡೆ ಆಗಲೇಬೇಕು. ಕೆಲಸ ಪ್ರಾರಂಭ ಮಾಡಿದರೂ ನಮ್ಮ ಸ್ಟುಡಿಯೋ ಮಾಲೀಕರು ಹಣವಿಲ್ಲದೆ ‘ಕಾಲು ಮುರಿದ ಕುದುರೆ ರೀತಿ, ಮೇಲಕ್ಕೆ ಏಳದೆ ಕುಳಿತಿದ್ದಾರೆ’ ಎಂದು ಕರಿ ಸುಬ್ಬು ಸದ್ಯದ ಪರಿಸ್ಥಿತಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.