ಸಾಮಾನ್ಯವಾಗಿ ನಾವು ಬೆಂಗಳೂರಿನಲ್ಲಿರುವ ಯಾವುದೇ ಮಾಲ್ ಒಳಗೆ ಕಾಲಿಟ್ಟರೆ ನಾವು ನಿಜವಾಗಲೂ ಕರ್ನಾಟಕದಲ್ಲಿ ಇದ್ದೀವ ಅಥವಾ ಬೇರೆ ರಾಜ್ಯದಲ್ಲಿ ಇದ್ದೀವ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಏಕೆಂದರೆ ಎತ್ತ ನೋಡಿದರೂ ಆಂಗ್ಲಭಾಷೆ ಅಕ್ಷರಗಳು ಅಲ್ಲಿ ಕಾಣಸಿಗುತ್ತವೆ.
ಬಹಳಷ್ಟು ಮಾಲ್ಗಳಲ್ಲಿ ಕನ್ನಡ ಎಂದರೆ ಏನೋ ಒಂದು ರೀತಿಯ ನಿರ್ಲಕ್ಷ್ಯ ಮನೋಭಾವ. ಇನ್ನು ಮಲ್ಟಿಪ್ಲೆಕ್ಸ್ಗಳಲ್ಲಂತೂ ಕನ್ನಡ ಅಂದ್ರೆ, ಎನ್ನಡ ಅನ್ನುವಷ್ಟು ಮಟ್ಟಕ್ಕೆ ಪರಭಾಷೆಗಳ ಹಾವಳಿ ಇದೆ. ಕರ್ನಾಟಕದಲ್ಲೇ ಇದ್ದು ಕನ್ನಡ ನೆಲ, ಜಲ ಬಳಸಿ ಹಣ ಮಾಡುವ ಚಾಳಿ ಬೆಳೆಸಿಕೊಂಡಿರುವ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಭಾಷೆ, ಕನ್ನಡ ಸಿನಿಮಾಗಳು ಎಂದರೆ ಮೂಗು ಮುರಿಯುತ್ತಾರೆ. ಹೀಗೆ ಕನ್ನಡ ಭಾಷೆ, ಕನ್ನಡ ಸಿನಿಮಾ ಎಂದರೆ ಸದಾ ನಿರ್ಲಕ್ಷ್ಯ ತೋರುವ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ, ಸಿರಸಿ ಸರ್ಕಲ್ನಲ್ಲಿರುವ ಗೋಪಾಲನ್ ಸಿನಿಮಾಸ್ ಸೆಡ್ಡು ಹೊಡೆದಿದೆ. ಇತರ ಮಲ್ಟಿಪ್ಲೆಕ್ಸ್ಗಳಿಗೆ ಇದು ತದ್ವಿರುದ್ಧವಾಗಿದೆ.
'ಗೋಪಾಲನ್ ಮಾಲ್' ನಲ್ಲಿರುವ ಟಿಕೆಟ್ ಕೌಂಟರ್ ಬಳಿಯ ಗೋಡೆ ಮೇಲೆ ಕನ್ನಡ ಚಿತ್ರರಂಗದ ನಟ, ನಿರ್ದೇಶಕರ ಫೋಟೋಗಳ ವಾಲ್ ನಿರ್ಮಾಣ ಮಾಡಿ ಇತರೆ ಮಲ್ಟಿಪ್ಲೆಕ್ಸ್ಗಳಿಗೆ ಮಾದರಿಯಾಗಿದೆ. ವಿಶೇಷ ಅಂದ್ರೆ 'ಗೋಪಾಲನ್ ಸಿನಿಮಾಸ್' ಫೋಟೋವಾಲ್ನಲ್ಲಿ ಕೇವಲ ಸ್ಟಾರ್ ನಟರ ಫೋಟೋಗಳು ಮಾತ್ರವಲ್ಲದೆ. ನಿರ್ದೇಶಕರು, ಹಾಸ್ಯನಟರು, ಖಳನಟರ ಫೋಟೋಗಳು ರಾರಾಜಿಸುತ್ತಿವೆ. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ನಾಗ್, ಟೈಗರ್ ಪ್ರಭಾಕರ್,ಅನಂತ್ ನಾಗ್, ಹಾಸ್ಯ ದಿಗ್ಗಜ ನರಸಿಂಹರಾಜು, ಎನ್.ಎಸ್. ರಾವ್, ರವಿಚಂದ್ರನ್, ಶಿವರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್ ಸೇರಿದಂತೆ ಬಹುತೇಕ ನಟ, ನಿರ್ದೇಶಕರ ಕಪ್ಪು ಬಿಳುಪಿನ ಫೋಟೋಗಳಿಗೆ ಫ್ರೇಂ ಹಾಕಿಸಿ ಇಡೀ ಕನ್ನಡ ಚಿತ್ರರಂಗವನ್ನೇ ಒಂದು ಕಡೆ ಸೇರಿಸಲಾಗಿದೆ.
ಸದಾ ಜನಜಂಗುಳಿಯಿಂದ ತುಂಬಿರುವ ಗೋಪಾಲನ್ ಸಿನಿಮಾಸ್ನವರು ಇಲ್ಲಿಗೆ ಬರುವ ಪರಭಾಷಿಕರಿಗೆ ಕನ್ನಡ ಚಿತ್ರರಂಗವನ್ನು ಪರಿಚಯಿಸುವ ಮೂಲಕ ಎಲೆ ಮರೆ ಕಾಯಿಯ ಹಾಗೆ ಕನ್ನಡ ಸೇವೆಯಲ್ಲಿ ನಿರತರಾಗಿದ್ದಾರೆ. ಅಲ್ಲದೆ ಇಲ್ಲಿಗೆ ಹೋಗುವ ಕನ್ನಡಿಗರಿಗೆ ಎಂದೂ ನೋಡಿರದ ಅವರ ನೆಚ್ಚಿನ ನಟರ ವಿಶೇಷ ಫೋಟೋಗಳನ್ನು ನೋಡುವ ಅವಕಾಶ ಕಲ್ಪಿಸಿದೆ. ಇಲ್ಲಿ ಬರುವವರು ಗೋಪಾಲನ್ ಸಿನಿಮಾಸ್ನವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.