ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ‘ರಂಗಸ್ಥಳ’ ಡಬ್ಬಿಂಗ್ ಸಿನಿಮಾ, ಕನ್ನಡದಲ್ಲಿ ಬಿಡುಗಡೆಯಾದ ಇತರ ಐದು ಸಿನಿಮಾಗಳಿಗಿಂತ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತ್ತು. ಸಾಯಿಸಿದ್ಧಿ ಪ್ರೊಡಕ್ಷನ್ಸ್ ‘ರಂಗಸ್ಥಳ’ ಚಿತ್ರವನ್ನು ರಾಜ್ಯದ 85 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತೆ ವ್ಯಾಪಾರಕ್ಕೆ ಮುಂದಾಗಿದ್ದರು. ಆದರೆ ಚಿತ್ರ ಬಿಡುಗಡೆಯಾಗಿ ಮೂರು ದಿನಗಳು ಕಳೆದಿವೆ.
ಚಿತ್ರಕ್ಕೆ ಶೇಕಡ 20 ರಷ್ಟು ಪ್ರೇಕ್ಷಕರು ಕೂಡಾ ಬಂದಿಲ್ಲ. ಇದರಿಂದ ಈ ಸಿನಿಮಾವನ್ನು ಬಿಡುಗಡೆ ಮಾಡಿದ ಚಿತ್ರಮಂದಿರಗಳು ಕಂಗಾಲಾಗಿವೆ. ಕಳೆದ ವರ್ಷ ಮಾರ್ಚ್ನಲ್ಲಿ ಈ ಸಿನಿಮಾ ತೆಲುಗು ಭಾಷೆಯಲ್ಲಿ ಬಿಡುಗಡೆಯಾದಾಗ ಸುಮಾರು 200 ಕೋಟಿಗೂ ಹೆಚ್ಚು ಲಾಭ ಮಾಡಿತ್ತು. ಆದರೆ ಅದೇ ಸಿನಿಮಾ ಡಬ್ ಆಗಿ ಕನ್ನಡಕ್ಕೆ ಬಂದಾಗ ಸಿಕ್ಕ ಪ್ರತಿಕ್ರಿಯೆ ನಿರಾಶಾದಾಯಕ.
ಈ ಹಿಂದೆ ಅಜಿತ್ ಅಭಿನಯದ ಕೆಲವು ತಮಿಳಿನಿಂದ ಡಬ್ ಆದ ಕನ್ನಡ ಸಿನಿಮಾಗಳು ಕೂಡಾ ಹೇಳ ಹೆಸಲಿಲ್ಲದಂತೆ ನೆಲಕಚ್ಚಿದ್ದವು. ಅಷ್ಟೇ ಏಕೆ ಕಳೆದ ತಿಂಗಳು ರಾಘವ್ ಲಾರೆನ್ಸ್ ಅಭಿನಯದ ‘ಕಾಂಚನ’ ಸಿನಿಮಾಗೂ ಇದೇ ಗತಿ ಬಂದಿತ್ತು. ಕನ್ನಡ ಪ್ರೇಕ್ಷಕರು ಡಬ್ ಆದ ಸಿನಿಮಾವನ್ನು ಪಕ್ಕಕ್ಕೆ ಸರಿಸಿದ್ದರು. ಸಾಯಿಸಿದ್ಧಿ ಪ್ರೊಡಕ್ಷನ್ಸ್ ಪ್ರಕಾಶ್ ಅವರ ಪ್ರಕಾರ ಕನ್ನಡಿಗರು ಪರ ಭಾಷೆಯ ಡಬ್ಬಿಂಗ್ ಸಿನಿಮಾಗಳನ್ನು ಇಷ್ಟಪಡುತ್ತಿಲ್ಲ.
ಅಷ್ಟೇ ಅಲ್ಲ, ಒಂದು ಜನಪ್ರಿಯ ಸಿನಿಮಾ ಬಿಡುಗಡೆಯಾಗಿ ಬಹಳ ದಿನಗಳ ನಂತರ ಡಬ್ ಆಗಿ ಬಂದರೆ ಅದಕ್ಕೆ ವ್ಯಾಲ್ಯೂ ಕೂಡಾ ಕಡಿಮೆಯೇ. ಏಕೆಂದರೆ ಆ ಗ್ಯಾಪ್ನಲ್ಲಿ ಎಲ್ಲರೂ ಆ ಸಿನಿಮಾ ನೋಡಿರುತ್ತಾರೆ.ಈ ನಡುವೆ ಡಬ್ಬಿಂಗ್ ಸಿನಿಮಾಗಳನ್ನು ನೋಡಲು ಯಾರೂ ಇಷ್ಟಪಡುವುದಿಲ್ಲ. ಇನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟನೆಯ 'ಡಿಯರ್ ಕಾಮ್ರೇಡ್' ಕೂಡಾ ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆಜಿಎಫ್ ಏಕ ಕಾಲದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು ಒಳ್ಳೆ ಪ್ರತಿಕ್ರಿಯೆ ಲಭಿಸಿದ್ದರಿಂದ ಅದೇ ಆಧಾರದ ಮೇಲೆ ಡಿಯರ್ ಕಾಮ್ರೇಡ್ ಬಿಡುಗಡೆಯಾಗುತ್ತಿದೆ. ಅದನ್ನು ಜನರು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕು.