ಕನ್ನಡ ಚಿತ್ರರಂಗದಲ್ಲಿ 2014ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ ಸಿನಿಮಾ ದೃಶ್ಯ. ಕ್ರೇಜಿ ಸ್ಟಾರ್ ರವಿಚಂದ್ರನ್ ರಾಜೇಂದ್ರ ಪೊನ್ನಪ್ಪನಾಗಿ, ಸಿಲ್ವರ್ ಸ್ಕ್ರೀನ್ನಲ್ಲಿ ರಾರಾಜಿಸಿದರು. ಕೆಲವು ದಿನಗಳ ಹಿಂದೆ ದೃಶ್ಯ ಸಿನಿಮಾ ಪಾರ್ಟ್-2 ಬರಲಿದೆ ಅಂತಾ ಹೇಳಲಾಗಿತ್ತು. ಇದೀಗ ದೃಶ್ಯ-2 ಚಿತ್ರದ ಮುಹೂರ್ತ ಯಲಹಂಕ ಬಳಿಯ ವೈಟ್ ಹೌಸ್ನಲ್ಲಿ ಸರಳವಾಗಿ ನೆರವೇರಿದೆ.
ಈಗಾಗಲೇ ದೃಶ್ಯ 2 ಮಲೆಯಾಳಂನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಇದರ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲಿ ಚಿತ್ರೀಕರಣ ಶುರುವಾಗಿದೆ. ಈಗ ನಿರ್ದೇಶಕ ಪಿ.ವಾಸು ಅವರ ಸಾರಥ್ಯದಲ್ಲಿ ಕನ್ನಡದಲ್ಲೂ ಚಿತ್ರೀಕರಣ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ.

ವಿಶೇಷವೆಂದರೆ ಹಿರಿಯ ನಟ ಅನಂತನಾಗ್ ಚಿತ್ರತಂಡ ಸೇರಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ವಿ.ರವಿಚಂದ್ರನ್, ಹಿರಿಯ ನಟ ಅನಂತನಾಗ್, ನಿರ್ದೇಶಕ ಪಿ.ವಾಸು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಅನಂತನಾಗ್ ಸಂತಸ ವ್ಯಕ್ತಪಡಿಸಿದ್ದು, ನಾನು ಕಳೆದ ಒಂದುವರೆ ವರ್ಷದಿಂದ ಮನೆಬಿಟ್ಟು ಆಚೆ ಬಂದಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಲಾಕ್ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕು ಕೆಜಿ ಕಡಿಮೆಯಾಗಿದ್ದೇನೆ ಎಂದರು.
ನನಗೆ ಕಥೆ ಇಷ್ಟವಾಗಿ, ಕೇವಲ ನಾಲ್ಕೈದು ದಿನಗಳಲ್ಲಿ ಈ ಚಿತ್ರದಲ್ಲಿ ಅಭಿನಯಿಸುವುದು ಖಚಿತವಾಯಿತು. ಸ್ವಲ್ಪ ಸಮಯದಲ್ಲಿ ಚಿತ್ರತಂಡ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದು ಸಂತಸದ ವಿಷಯ. ಪಿ.ವಾಸು ಅವರ ನಿರ್ದೇಶನದಲ್ಲಿ ನಾನು ನಟಿಸುತ್ತಿರುವ 2ನೇ ಚಿತ್ರವಿದು. ಎಂದಿನಂತೆ ರಾಜೇಂದ್ರ ಪೊನ್ನಪ್ಪ ಜೊತೆ, ದೃಶ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ನವ್ಯ ನಾಯರ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ.

ಭರತ್ ಅವರ ನಿರ್ಮಾಣ ನಿರ್ವಹಣೆ : ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯೂಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಜಿಎಸ್‌ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಅವರ ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿ ಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ದೃಶ್ಯ-2 ಚಿತ್ರಕ್ಕಿದೆ.
ಇಂದಿನಿಂದಲೇ ಚಿತ್ರೀಕರಣ ಶುರು : E4 ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸಿ ವಿ ಸಾರಥಿ. ಜೀತು ಜೋಸೆಫ್ ಕಥೆ ಬರೆದಿದ್ದು, ಪಿ.ವಾಸು ನಿರ್ದೇಶನ ಮಾಡುತ್ತಿದ್ದಾರೆ. ಇಂದಿನಿಂದಲೇ ದೃಶ್ಯ 2 ಚಿತ್ರೀಕರಣ ಶುರುವಾಗಲಿದೆ. ದೃಶ್ಯ ಸಿನಿಮಾದಂತೆ ಇದರ ಮುಂದುವರಿದ ಭಾಗ ದೃಶ್ಯ 2, ಸಿನಿಮಾ ಪ್ರೇಕ್ಷಕರಿಗೆ ಎಷ್ಟು ಇಷ್ಟ ಆಗಲಿದೆ ಅನ್ನೋದು ಚಿತ್ರ ತೆರಗೆ ಬಂದ ಮೇಲೆ ಗೊತ್ತಾಗಲಿದೆ.
ಓದಿ: COVID Case ಹೆಚ್ಚಳ: ಬಾಲಿವುಡ್ ನಟ ಸುನಿಲ್ ಶೆಟ್ಟಿ ವಾಸವಿರುವ ಅಪಾರ್ಟ್ಮೆಂಟ್ ಸೀಲ್ಡೌನ್