ಹೊಂಬಾಳೆ ಫಿಲ್ಮ್ ಬ್ಯಾನರ್ನ ವಿಜಯ್ ಕಿರಗಂದೂರ್ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸೇರಿ ಇತ್ತೀಚೆಗೆ 'ಸಲಾರ್' ಚಿತ್ರವನ್ನು ಘೋಷಿಸಿದ್ದರು. ಟಾಲಿವುಡ್ ನಟ ಪ್ರಭಾಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ಭಾರೀ ಸದ್ದು ಮಾಡಿದೆ.
'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲಿರುವ ನಾಯಕಿ, ಪೋಷಕ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಈಗ ಈ ಚಿತ್ರಕ್ಕೆ ಕನ್ನಡದ ಸಿನಿಮಾಟೋಗ್ರಾಫರ್ ಕೆಲಸ ಮಾಡುತ್ತಿದ್ದಾರೆ. ಉಗ್ರಂ, ರಥಾವರ್, ಪುಷ್ಪಕವಿಮಾನ, ಕೆಜಿಎಫ್-1 ಹಾಗೂ ಚಾಪ್ಟರ್ 2 ಕ್ಕೆ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿರುವ ಭುವನ್ ಗೌಡ ಸಲಾರ್ ಚಿತ್ರಕ್ಕೆ ಕೂಡಾ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಗ್ರಂ, ಕೆಜಿಎಫ್, ಸೀಕ್ವೆಲ್ಗಳಿಗೆ ಭುವನ್ ಗೌಡ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದು ಸಲಾರ್ ಇವರಿಬ್ಬರ ಕಾಂಬಿನೇಶನ್ನ 4ನೇ ಚಿತ್ರವಾಗಿದೆ.
ಇದನ್ನೂ ಓದಿ: ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್
ಸಲಾರ್ ಚಿತ್ರದ ಬಗ್ಗೆ ಮಾತನಾಡಿರುವ ಭುವನ್ ಗೌಡ, ಸಲಾರ್ ಚಿತ್ರಕ್ಕಾಗಿ ಕೆಲಸ ಮಾಡಲು ಬಹಳ ಖುಷಿಯಾಗುತ್ತಿದೆ. ಸದ್ಯಕ್ಕೆ ಫಸ್ಟ್ಲುಕ್ ಪೋಸ್ಟರ್ಗಾಗಿ ಫೋಟೋಶೂಟ್ ಮಾಡಲಾಗುತ್ತಿದೆ. ಪ್ರಶಾಂತ್ ನೀಲ್ ಅವರಂತ ನಿರ್ಮಾಪಕ ಹಾಗೂ ಪ್ರಭಾಸ್ ಅವರಂತ ನಟನ ಜೊತೆ ಕೆಲಸ ಮಾಡಲು ಖುಷಿಯಾಗುತ್ತಿದೆ. ನನ್ನನ್ನು ನಂಬಿ ಪ್ರಶಾಂತ್ ನೀಲ್ ಈ ಕೆಲಸ ವಹಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವಂತ ಕೆಲಸ ಮಾಡುತ್ತೇನೆ. 2021 ಜನವರಿಯಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಸೂಕ್ತ ಕಲಾವಿದರು ಹಾಗೂ ತಂತ್ರಜ್ಞರಿಗಾಗಿ ಆಡಿಷನ್ ನಡೆಯುತ್ತಿದೆ ಎಂದು ಭುವನ್ ಗೌಡ ಹೇಳಿದ್ದಾರೆ. ಸದ್ಯಕ್ಕೆ ಪ್ರಶಾಂತ್ ನೀಲ್ ಹಾಗೂ ಭುವನ್ ಗೌಡ ಇಬ್ಬರೂ ಕೆಜಿಎಫ್ -2 ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.