ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ತಮ್ಮ ಹೆಸರು, ಆಕರ್ಷಣೀಯವಾಗಿರಬೇಕು ಅನ್ನೋದು ಪ್ರತಿಯೊಬ್ಬ ನಟ, ನಟಿಯರ ಆಸೆ. ಆದರೆ ಜಾತಕ ಫಲ ಹಾಗೂ ನಿರ್ದೇಶಕರ ಒತ್ತಾಯದ ಮೇರೆಗೆ ಕೆಲ ನಟಿಯರು ತಮ್ಮ ಹೆಸರನ್ನ ಬದಲಿಸಿಕೊಂಡು ಚಿತ್ರರಂಗದಲ್ಲಿ, ಸಕ್ಸಸ್ ಫುಲ್ ಹೀರೋಯಿನ್ ಆಗಿ ಹೊರ ಹೊಮ್ಮಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಿನುಗು ತಾರೆ ಕಲ್ಪನಾ :
ಈ ಮಿನುಗು ತಾರೆಯ ನಿಜವಾದ ನಾಮಧೇಯ ಶರತ್ ಲತಾ. ಈ ಶರತ್ ಲತಾ ಇಂದು ಕನ್ನಡ ಚಿತ್ರರಂಗದ ಮಿನುಗು ತಾರೆಯಾಗಿದ್ದು ಮಾತ್ರ ರೋಚಕ ಕಥೆ. 1963 ರಲ್ಲಿ ತೆರೆ ಕಂಡ ‘ಸಾಕು ಮಗಳು’ ಚಿತ್ರದಿಂದ ಸಿನಿಮಾ ಪಯಣವನ್ನ ಕಲ್ಪನಾ ಆರಂಭಿಸಿದರು. ಆದರೆ ಕಲ್ಪನಾ ಅಂತ ಹೆಸರು ಬದಲಿಸಿದ್ದು, ಪ್ರಖ್ಯಾತ ನಿರ್ದೇಶಕ ಬಿ.ಆರ್.ಪಂತುಲು. ಶರತ್ ಲತಾಗೆ ಕಲ್ಪನಾ ಎಂದು ಮರುನಾಮಕರಣ ಮಾಡಿದರು. ಅಲ್ಲಿಂದ ಕಲ್ಪನಾ ಕನ್ನಡ ಚಿತ್ರರಂಗದ ಮಿನುಗು ತಾರೆಯಾಗಿದ್ದು ಇತಿಹಾಸ.
ನಟಿ ಲೀಲಾವತಿ :
ಪೋಷಕ ಪಾತ್ರಗಳನ್ನು ಮಾಡುತ್ತ ಕನ್ನಡ ಚಿತ್ರರಂಗದಲ್ಲಿ, ಬೇಡಿಕೆ ಹೆಚ್ಚಿಸಿಕೊಂಡ ನಟಿ ಲೀಲಾವತಿ 1958ರಲ್ಲಿ ತೆರೆಗೆ ಬಂದ ‘ಮಾಂಗಲ್ಯ ಯೋಗ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದರು. ಆದರೆ ಲೀಲಾವತಿ ಮೂಲ ಹೆಸರು ಲೀಲಾ ಕಿರಣ್. ಪಿ.ಕೆ.ಲಾಲ್ ಎಂಬ ನಿರ್ದೇಶಕ ಸಿನಿಮಾಕ್ಕಾಗಿ ಲೀಲಾ ಕಿರಣ್ ಹೆಸರನ್ನ, ಲೀಲಾವತಿ ಎಂದು ಬದಲಿಸಿದರಂತೆ. ಅಲ್ಲಿಂದ ಲೀಲಾವತಿ, ಡಾ.ರಾಜ್ ಕುಮಾರ್ ಸೇರಿ ಅನೇಕ ಪ್ರಖ್ಯಾತ ನಟರ ಜೊತೆ ನಟಿಸಿದರು.
ಅಭಿನಯ ಶಾರದೆ ನಟಿ ಜಯಂತಿ :
ಕನ್ನಡ ಚಿತ್ರರಂಗ ಅಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟನೆಯಿಂದ, ‘ಅಭಿನಯ ಶಾರದೆ’ ಎಂಬ ಬಿರುದು ಪಡೆದವರು ನಟಿ ಜಯಂತಿ. 1968 ರಲ್ಲಿ ತೆರೆ ಕಂಡ ವೈ.ಆರ್.ಸ್ವಾಮಿ ನಿರ್ದೇಶನದ ‘ಜೇನು ಗೂಡು’ ಚಿತ್ರದ ಮೂಲಕ ಜಯಂತಿ ಚಿತ್ರರಂಗಕ್ಕೆ ಕಾಲಿಟ್ಟರು. ಇಂದು ಬಹುಭಾಷಾ ನಟಿಯಾಗಿ ಹೊರ ಹೊಮ್ಮಿರುವ ಜಯಂತಿ ಅವರ ನಿಜವಾದ ಹೆಸರು ಕಮಲ ಕುಮಾರಿ. ಸಿನಿಮಾಕ್ಕಾಗಿ ನಿರ್ದೇಶಕ ವೈ.ಆರ್.ಸ್ವಾಮಿ ಕಮಲ ಕುಮಾರಿಗೆ ಜಯಂತಿ ಎಂದು ಹೆಸರಿಟ್ಟರಂತೆ. ಅಲ್ಲಿಂದ ಕಮಲ ಕುಮಾರಿ ಅಭಿನಯ ಶಾರದೆ ಜಯಂತಿ ಆಗಿದ್ದು ಚಿತ್ರರಂಗದ ಪುಟಗಳಲ್ಲಿ ದಾಖಲಾಗಿದೆ.
ನಟಿ ಸುಧಾರಾಣಿ :
ಚಿಕ್ಕವಯಸ್ಸಿನಲ್ಲೇ ಜಾಹೀರಾತಿನಲ್ಲಿ ಮಿಂಚಿ ಗಮನ ಸೆಳೆದ ಬ್ಯೂಟಿ ಸುಧಾರಾಣಿ. 1983 ರಲ್ಲಿ ಶಿವರಾಜ್ ಕುಮಾರ್ ಚೊಚ್ಚಲ ಚಿತ್ರದ ನಾಯಕಿಯಾಗಿ, ಚಿತ್ರರಂಗ ಪ್ರವೇಶ ಮಾಡಿದರು. ಸುಧಾರಾಣಿ ಒರಿಜಿನಲ್ ಹೆಸರು ಜಯಶ್ರೀ. ಜಯಶ್ರೀಗೆ ಸುಧಾರಾಣಿ ಎಂದು ಹೆಸರು ಬದಲಿಸಿದ್ದು ಪಾರ್ವತಮ್ಮ ರಾಜ್‍ಕುಮಾರ್. ಜಾತಕ ಫಲ ನೋಡಿ ಪಾರ್ವತಮ್ಮ ಅವರು ಸುಧಾರಾಣಿ ಎಂದು ಮರುನಾಮಕರಣ ಮಾಡಿದರಂತೆ. ಅಂದಿನಿಂದ ಜಯಶ್ರೀ ಕನ್ನಡ ಚಿತ್ರರಂಗದಲ್ಲಿ ರಾಣಿಯಂತೆ ಬೆಳೆದು ನಿಂತಿದ್ದಾರೆ. ಒಂದು ಅಚ್ಚರಿ ವಿಷಯ ಅಂದರೆ ಸಾಕಷ್ಟು ನಟಿಮಣಿಯರ ಹೆಸರನ್ನ ಬದಲಿಸಿದ ಹೆಗ್ಗಳಿಕೆ ಪಾರ್ವತಮ್ಮ ರಾಜ್ಕುಮಾರ್ಗೆ ಸಲ್ಲುತ್ತೆ.
ನಟಿ ಮಾಲಾಶ್ರೀ :
ಮೂಲತಃ ತೆಲುಗಿನವರಾದ ಮಾಲಾಶ್ರೀ, ಮೊದಲ ಹೆಸರು ದುರ್ಗಾಶ್ರೀ. ‘ನಂಜುಂಡಿ ಕಲ್ಯಾಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಾತಕ ಫಲ ನೋಡಿ ಪಾರ್ವತಮ್ಮ ರಾಜ್‍ಕುಮಾರ್ ಮಾಲಾಶ್ರೀ ಎಂದು ಹೆಸರು ಬದಲಾಯಿಸಿದರು.
ನಟಿ ರಕ್ಷಿತಾ :
‘ಅಪ್ಪು’ ಸಿನಿಮಾ ಮೂಲಕ ಪವರ್ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಿದ ಶ್ವೇತಾನೇ ಇಂದಿನ ರಕ್ಷಿತಾ. ನಟಿ ಮಮತಾ ರಾವ್ ಮುದ್ದಿನ ಮಗಳಾಗಿದ್ದ ಶ್ವೇತಾ ಅವರನ್ನು ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲಾಯಿತು. ಆಗ ಪಾರ್ವತಮ್ಮ ರಾಜ್‍ಕುಮಾರ್ ಶ್ವೇತಾ ಹೆಸರು ಸೂಟ್ ಆಗಲ್ಲ ಎಂಬ ಕಾರಣಕ್ಕೆ, ಜಾತಕ ಫಲ ನೋಡಿ ರಕ್ಷಿತಾ ಎಂದು ಮರುನಾಮಕರಣ ಮಾಡಿದರು. ಅಂದಿನಿಂದ ರಕ್ಷಿತಾ ಟಾಪ್ ಸ್ಟಾರ್ ಗಳ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.
ನಟಿ ರಮ್ಯ :
ರಮ್ಯ ನಿಜವಾದ ಹೆಸರು ದಿವ್ಯಸ್ಪಂದನ. ದಿವ್ಯಸ್ಪಂದನ ಎಂಬ ಹೆಸರನ್ನು ರಮ್ಯಾ ಅಂತ ಬದಲಿಸಿದ್ದು ಸಹ ಪಾರ್ವತಮ್ಮ ರಾಜ್‍ಕುಮಾರ್ ಅನ್ನೋದು ವಿಶೇಷ. ‘ಅಭಿ’ ಚಿತ್ರದ ಮೂಲಕ ರಮ್ಯ ಚಂದನವಕ್ಕೆ ಎಂಟ್ರಿ ಕೊಟ್ಟರು. ದಿವ್ಯಸ್ಪಂದನ ಸ್ಯಾಂಡಲ್ವುಡ್ ಕ್ವೀನ್ ಆಗಿ ಮರೆದಿದ್ದು ಇತಿಹಾಸ.
ನಟಿ ಹರಿಪ್ರಿಯಾ :
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ನಟಿ ಹರಿಪ್ರಿಯಾ ಮೊದಲ ಹೆಸರು ಶೃತಿ. ಸಿನಿಮಾಗಾಗಿ ಹರಿಪ್ರಿಯಾ ಎಂದು ಹೆಸರನ್ನ ಬದಲಿಸಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಯಿಸಿದರು.
ಡಿಂಪಲ್ ಕ್ವೀನ್ ರಚಿತಾ ರಾಮ್ :
ನಟಿ ರಚಿತಾ ರಾಮ್ ಮೂಲ ಹೆಸರು ಬಿಂದಿಯಾ ರಾಮ್. ಕಿರುತೆರೆಯಲ್ಲಿ ಬಿಂದಿಯಾ ರಾಮ್ ಆಗಿ ಚಿರಪರಿಚಿತರಾಗಿದ್ದ ರಚಿತಾ ರಾಮ್ ‘ಬುಲ್ ಬುಲ್’ ಸಿನಿಮಾ ಮೂಲಕ, ತಮ್ಮ ಹೆಸರನ್ನ ಬದಲಿಸಿಕೊಂಡರು. ಅಲ್ಲಿಂದ ಬಿಂದಿಯಾ ರಾಮ್ ರಚಿತಾ ರಾಮ್ ಆಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.
ಚಿಕ್ಕಮಗಳೂರು ಚೆಲುವೆ ನಟಿ ದೀಪಾ ಸನ್ನಿಧಿ :
ಇದೇ ಸಾಲಿನಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್, ಗಣೇಶ್ ಜೊತೆ ಮಿಂಚಿದ ಚಿಕ್ಕಮಗಳೂರು ಚೆಲುವೆ ದೀಪಾ ಸನ್ನಿಧಿ. ಇವರ ಒರಿಜಿನಲ್ ಹೆಸರು ರಹಸ್ಯ. ದರ್ಶನ್ ಜೊತೆ ನಟಿಸಿದ ‘ಸಾರಥಿ’ ಸಿನಿಮಾಕ್ಕಾಗಿ, ದೀಪಾ ಸನ್ನಿಧಿ ಎಂದು ಜಾತಕ ಫಲದಂತೆ ಮರುನಾಮಕರಣ ಮಾಡಿಕೊಂಡರು. ಅಂದಿನಿಂದ ರಹಸ್ಯ, ದೀಪಾ ಸನ್ನಿಧಿಯಾಗಿ ಸ್ಟಾರ್ ನಟರ ಜೊತೆ ಮಿಂಚಿದ್ದಾರೆ.