ಬೆಂಗಳೂರು: ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಲೆ ಸುತ್ತಿ ಬಿದ್ದಿದ್ದು, ತಲೆಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಾಸಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ (83)ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ವಿದ್ಯಾಪೀಠ ಸರ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿತ್ತು. ಇದರ ಬೆನ್ನಲ್ಲೇ ಸ್ಥಿತಿ ಗಂಭೀರವಾಗಿದ್ದರಿಂದ ಕೋಮಾಗೆ ಜಾರಿದ್ದರು. ಆದರೆ, ಮೂರು ದಿನಗಳ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿರಿ: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಗಂಭೀರ
ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್, ದೊಡ್ಡಣ್ಣ, ಗಿರಿಜಾ ಲೋಕೇಶ್, ಹಾಗೂ ವಿಷ್ಣುವರ್ಧನ್ ಪತ್ನಿ ಭಾರತಿ ಸೇರಿದಂತೆ ಅನೇಕರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.
ನಾಳೆ ಬೆಳಗ್ಗೆ 7.30ರಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ತದನಂತರ 11 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶಿವರಾಮ್ ಅವರ ಪುತ್ರ ಲಕ್ಷ್ಮೀಶ್ ಹೇಳಿದ್ದಾರೆ.
1958ರಿಂದ 1965ರವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶಿವರಾಮ್ ಅವರು, ನಟ ಕಲ್ಯಾಣ ಕುಮಾರ್ ನಟನೆಯ ಬೆರೆತ ಜೀವ ಚಿತ್ರದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಶರಪಂಜರ, ನಾಗರಹಾವು, ಶುಭಮಂಗಳ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಸಬೆಳಕು, ಗುರುಶಿಷ್ಯರು, ಮಕ್ಕಳ ಸೈನ್ಯ, ಆಪ್ತಮಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇದರ ಜೊತೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗೃಹಭಂಗ, ರವಿಕಿರಣ್ ನಿರ್ದೇಶನದ ಬದುಕು ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ.
ಪ್ರಮುಖವಾಗಿ ನಿರ್ದೇಶಕ ಕಣಗಾಲ್ ಪುಟ್ಟಣ್ಣ ಅವರೊಂದಿಗೆ ಶಿವರಾಮ್ ಅವರು ಕೆಲಸ ಮಾಡಿದ್ದರು. ಇವರಿಗೆ ಚಿತ್ರರಂಗದಲ್ಲಿ ಶಿವರಾಮಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಡಾ. ರಾಜ್ಕುಮಾರ್ ಕುಟುಂಬದೊಂದಿಗೆ ಶಿವರಾಮ್ ಅವರು ವಿಶೇಷ ಸಂಬಂಧವಿಟ್ಟುಕೊಂಡಿದ್ದರು.