ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೆ ಕರ್ನಾಟಕದಲ್ಲಿಯೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಪ್ರತಿಭಟಿಸುತ್ತಿದ್ದಾರೆ. ದಕ್ಷಿಣ ರಾಜ್ಯಗಳ ತೀವ್ರ ಆಕ್ರೋಶಕ್ಕೆ ಮಣಿದಂತಿರುವ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿದ್ದು, ಅದರಲ್ಲಿ 'ಹಿಂದಿ ಕಡ್ಡಾಯ' ಎಂಬ ಭಾಗ ಕೈ ಬಿಟ್ಟಿದೆ.
ರಾಜ್ಯದಲ್ಲಿ ಹಿಂದಿ ಭಾಷೆ ವಿರುದ್ಧ ಹೋರಾಟ ನಡೆದಿರುವ ಸಂದರ್ಭದಲ್ಲೇ ನವರಸ ನಾಯಕ ಜಗ್ಗೇಶ್ ಅವರ ಟ್ವೀಟ್ ಗಮನ ಸೆಳೆಯುತ್ತಿದೆ. ತಮ್ಮದೇ ಒಂದು ಉದಾಹರಣೆ ನೀಡಿರುವ ಅವರು, ಅನ್ಯಭಾಷೆ ಕಲಿಕೆ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದಾರೆ.
ಭಾರತ ದೇಶ ಸುತ್ತಿ ಕಾರ್ಯ ಸಾಧಿಸಿ ಬರಲು 14 ಭಾಷೆ ಕಲಿ. ನಿನಗೆ ಇದೆಲ್ಲ ಬೇಡ, ಕರ್ನಾಟಕವೇ ಸಾಕು ಎಂದರೆ ಕನ್ನಡ ಸಾಕು ಎಂದು ಪಿ.ಬಿ.ಶ್ರೀನಿವಾಸ್ ಅವರು ಜಗ್ಗೇಶ್ ಅವರಿಗೆ ಹೇಳಿದ್ದರಂತೆ. ಇದನ್ನು ಪ್ರಸ್ತಾಪಿಸಿರುವ ಜಗ್ಗೇಶ್, ನನಗೆ ಮೊದಲು ಕನ್ನಡ ಬಿಟ್ಟು ಯಾವ ಭಾಷೆಯೂ ಬರುತ್ತಿರಲಿಲ್ಲ. ಇಂದು ನಾನು 5 ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡುವೆ. ಜತೆಗೆ ಈಗ ಸಂಸ್ಕೃತವನ್ನೂ ಕಲಿಯುತ್ತಿರುವೆ ಎಂದಿದ್ದಾರೆ. ಇಷ್ಟು ಹೇಳಿರುವ ಅವರು ಕೊನೆಯಲ್ಲಿ ಕನ್ನಡ ಆರಾಧಿಸಿ, ಸಂಪರ್ಕಕ್ಕೆ ಅನ್ಯಭಾಷೆ ಕಲಿಯಿರಿ ಎಂದಿದ್ದಾರೆ.