'ಮಿಷನ್ ಮಂಗಲ್'ನಲ್ಲಿ ‘ಸ್ಟ್ರಕ್ಚರಲ್ ಇಂಜಿನಿಯರ್’ ಪಾತ್ರ ನಿರ್ವಹಿಸಿರುವ ದತ್ತಣ್ಣ ಈ ಸಿನಿಮಾ ಬಗ್ಗೆ ಈ ಟಿವಿ ಭಾರತ್ ಜೊತೆ ಮಾತಾಡಿದ್ದಾರೆ. ದತ್ತಣ್ಣ ಅವರಿಗೆ ಇದು ಬಾಲಿವುಡ್ನಲ್ಲಿ ಮೊದಲ ಚಿತ್ರವಲ್ಲ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಹಿಂದಿ ಸಿನಿಮಾ ಮೂಲಕ. ಟಿ.ಎಸ್.ರಂಗ ಅವರ 'ಉದ್ಭವ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅವರು ನಂತರ ಹಿಂದಿಯ ದೂಸ್ರಾ ಸಿನಿಮಾದಲ್ಲಿ ನಟಿಸುತ್ತಾರೆ. ಹೀಗೆ ತಮ್ಮ ಸಿನಿ ಪಯಣ ಆರಂಭದ ಬಗ್ಗೆ ಹೇಳಿದ ದತ್ತಣ್ಣ, ನಾನು ನಟಿಸಿದ ಬಾಲಿವುಡ್ನ ಬಿಗ್ ಸ್ಟಾರ್ಗಳ ಹೈ-ಬಜೆಟ್ನ ಪಕ್ಕಾ ಕಮರ್ಷಿಯಲ್ ಚಿತ್ರ ಅಂದ್ರೆ ಅದು ಮಿಷನ್ ಮಂಗಲ್ ಎಂದರು.
ಈ ಸಿನಿಮಾದ ನಿರ್ದೇಶಕ ಕನ್ನಡಿಗ ಜಗನ್ ಶಕ್ತಿ. ಮೊದಲಿಗೆ ಅವರು ಬಂದು ನನ್ನ ಬಳಿ ಚಿತ್ರದ ಬಗ್ಗೆ ಮಾತನಾಡಿದರು. ಪ್ರಾರಂಭದಲ್ಲಿ ನನ್ನ ಹಿಂದಿ ಭಾಷೆ ಅಷ್ಟು ಸರಿಯಿಲ್ಲ ಎಂದು ಅವರಿಗೆ ಹೇಳಿದೆ. ಆದರೆ, ಈ ಚಿತ್ರ ಬೆಂಗಳೂರು ಬೇಸ್ಡ್ ಚಿತ್ರವಾದ್ದರಿಂದ ಭಾಷೆಯ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದ ಮೇಲೆ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ ದತ್ತಣ್ಣ.
ಮಿಷನ್ ಮಂಗಲ್ ಅನುಭವ ಹಂಚಿಕೊಂಡಿರುವ ಅವರು, ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ನಟರು ದೂರದಿಂದ ನೋಡಿದ್ದೆ. ಆದರೆ, ಹತ್ತಿರದಿಂದ ನೋಡಿ ಅವರ ಜತೆ ಕೆಲಸ ಮಾಡಿದೆ. ಎಲ್ಲರೂ ತುಂಬಾ ಫ್ರೆಂಡ್ಲಿಯಾಗಿ ನನ್ನ ಜೊತೆ ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಸಂತೋಷವಾಗಿದೆ. ಅಲ್ಲದೆ ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರೊಬ್ಬ ಜಂಟಲ್ಮನ್, ಅವರ ಬದುಕಿನ ರೀತಿಯೇ ಬೇರೆ. ಅವರು ತುಂಬಾ ಶಿಸ್ತಿನ ನಟ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರಹಿತ, ದೇಶಭಕ್ತಿ ಉದ್ಧೀಪನಗೊಳಿಸುವಂತಹ ಸಿನಿಮಾ ಮಾಡಿದ್ದಾರೆ. ಬಹಳ ಕಮಿಟೆಡ್ ಆರ್ಟಿಸ್ಟ್, ಒಂದು ಒಳ್ಳೆಯ ಸಿನಿಮಾ ಸಿಕ್ಕರೆ ಅವರೇ ನಿರ್ಮಾಣ ಮಾಡ್ತಾರೆ. ಬೇರೆ ನಟರು ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡ್ತಾರೆ. ಆದ್ರೆ ಇವರು ವರ್ಷದಲ್ಲಿ ನಾಲ್ಕೈದು ಸಿನಿಮಾ ಮಾಡುತ್ತಾರೆ ಎಂದು ಅಕ್ಷಯ್ ಕುಮಾರ್ ಅವರನ್ನು ಹೊಗಳಿದ್ರು ದತ್ತಣ್ಣ.
ಇನ್ನು ಮಿಷನ್ ಮಂಗಲ್ ಎಲ್ಲ ವರ್ಗದವರು ನೋಡಬೇಕಾದ ಚಿತ್ರ. ಅದರಲ್ಲೂ ವಿದ್ಯಾರ್ಥಿಗಳು ತಪ್ಪದೆ ನೋಡಬೇಕು. ನಮ್ಮ ರಾಜಕಾರಣಿಗಳು ಸಹ ನೋಡಲೇಬೇಕಾದಂತಹ ಚಿತ್ರವಾಗಿದೆ. ಯಾಕೆಂದ್ರೆ ಇಲ್ಲಿ ಕ್ರೈಸಿಸ್ ಆಫ್ ಲೀಡರ್ಶಿಪ್ ಇದೆ. ಈ ಸಿನಿಮಾ ನೋಡಿದ್ರೆ ನಾಯಕನ ಅಂದ್ರೆ ಏನು? ಅವನು ಯಾವ ರೀತಿ ಕೆಲಸ ಮಾಡಿದರೆ ಜನರನ್ನು ಒಟ್ಟುಗೂಡಿಸಿ ಸಬಹುದು, ಅಲ್ಲದೆ ದೇಶದ ಹಿತದೃಷ್ಟಿಯಿಂದ ಒಂದು ಒಳ್ಳೆ ಕೆಲಸ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬ ರಾಜಕಾರಣಿ ಈ ಸಿನಿಮಾ ನೋಡಲೇಬೇಕು ಎಂದು ದತ್ತಣ್ಣ ಮನವಿ ಮಾಡಿದ್ರು.