ಬಾಲಿವುಡ್ ನಟಿ ಕಂಗನಾ ರಣಾವತ್ ಬಂಗಲೆಯನ್ನು ಬೃಹನ್ ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಕೆಡವಿದ ಕ್ರಮ ದುರುದ್ದೇಶದಿಂದ ಕೂಡಿದೆ, ಇದರಿಂದ ಕಂಗನಾಗೆ ಸಾಕಷ್ಟು ನಷ್ಟವಾಗಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಬಿಎಂಸಿ ಆದೇಶವನ್ನು ಶುಕ್ರವಾರ ಅನೂರ್ಜಿತಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಒಬ್ಬಳೇ ಸರ್ಕಾರದ ಕ್ರಮದ ವಿರುದ್ಧ ಹೋರಾಡಿ ಗೆದ್ದಿದ್ದೇನೆ ಅಂದ್ರೆ ಅದು ಕೇವಲ ನನ್ನ ಜಯ ಅಲ್ಲ. ಅದು ಪ್ರಜಾಪ್ರಭುತ್ವದ ಜಯ ಎಂದು ಕಂಗನಾ ಪ್ರತಿಕ್ರಿಯಿಸಿದ್ದಾರೆ. ಆ ವೇಳೆಯಲ್ಲಿ ನನಗೆ ಧೈರ್ಯ ನೀಡಿದ ಎಲ್ಲರಿಗೂ ಧನ್ಯವಾದ ಎಂದೂ ಕಂಗನಾ ಇದೇ ವೇಳೆ ಹೇಳಿದ್ದಾರೆ.
ಮತ್ತು ತಮ್ಮ ವಿರೋಧಿಗಳಿಗೆ ನಯವಾಗಿಯೇ ಟಾಂಗ್ ಕೊಟ್ಟಿರುವ ನಟಿ ಕಂಗನಾ ರಣಾವತ್, ನನ್ನ ಕನಸುಗಳು ಮುರಿದ, ನನ್ನ ಬಂಗಲೆ ಹಾಳಾದಾಗ ನಗುತ್ತಿದ್ದ ನಿಮಗೂ ಧನ್ಯವಾದಗಳು. ನೀವು ವಿಲನ್ ಆಗಿದ್ದಾಗ ಮಾತ್ರ ನಾನು ಹೀರೋ ಆಗಲು ಸಾಧ್ಯ ಎಂದಿದ್ದಾರೆ.
ಕಂಗನಾ ರಣಾವತ್ ಸೆಪ್ಟೆಂಬರ್ 9ರಂದು ಬಾಂದ್ರಾದಲ್ಲಿರುವ ತಮ್ಮ ಬಂಗಲೆಯ ಒಂದು ಭಾಗವನ್ನು ಬಿಎಂಸಿ ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಟಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.