ಬಾಲಿವುಡ್ನ 'ಕ್ಯೂ ಹೋಗಯಾ ನ' ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕಾಜಲ್ ಅಗರ್ವಾಲ್, ತಮಿಳು, ತೆಲುಗು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ 'ಮಗಧೀರ' ಕಾಜಲ್ ಅಗರ್ವಾಲ್ಗೆ ಹೆಸರು ತಂದುಕೊಟ್ಟ ಸಿನಿಮಾ.

ಇದೀಗ ಕಾಜಲ್, ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬ್ಲಾಕ್ ಬಸ್ಟರ್ ಇಂಡಿಯನ್ ಭಾಗ-2ರಲ್ಲಿ 85ರ ವೃದ್ಧೆಯಾಗಿ ನಟಿಸುತ್ತಿದ್ದಾರಂತೆ. 1996ರಲ್ಲಿ ಬಿಡುಗಡೆಯಾದ ಶಂಕರ್ ನಿರ್ದೇಶನದ 'ಇಂಡಿಯನ್' ಚಿತ್ರ ಬ್ಲಾಕ್ ಬಸ್ಟರ್ ಸಾಲಿಗೆ ಸೇರಿತ್ತು. ಕಮಲ್ ಹಾಸನ್ ಈ ಚಿತ್ರದಲ್ಲಿ ಅಪ್ಪ-ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದರು. ಮನಿಷಾ ಕೊಯಿರಾಲ, ಊರ್ಮಿಳಾ ಮಾತೊಂಡ್ಕರ್ ಯಂಗ್ ಕಮಲ್ ಹಾಸನ್ಗೆ ಜೋಡಿಯಾಗಿ ನಟಿಸಿದ್ದರೆ, ವೃದ್ಧನ ಪಾತ್ರಕ್ಕೆ ಜೋಡಿಯಾಗಿ ನಟಿ ಸುಕನ್ಯಾ ನಟಿಸಿದ್ದರು. ಇದೀಗ ಕಾಜಲ್ ಅಗರ್ವಾಲ್ ಈ ಚಿತ್ರದಲ್ಲಿ 85 ವರ್ಷದ ವೃದ್ಧೆಯಾಗಿ ನಟಿಸುತ್ತಿದ್ದು ಕಮಲ್ ಹಾಸನ್ 90 ವರ್ಷದ ವೃದ್ಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಮಲ್ ಹಾಸನ್, ಕಾಜಲ್ ಅಗರ್ವಾಲ್ ಜೊತೆಗೆ ಇಂಡಿಯನ್-2 ಚಿತ್ರದಲ್ಲಿ ಸಿದ್ದಾರ್ಥ್, ವಿವೇಕ್, ರಾಕುಲ್ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ವಿದ್ಯುತ್ ಜಮ್ವಾಲ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಸುಭಾಷ್ ಕರಣ್ ಚಿತ್ರವನ್ನು ನಿರ್ಮಿಸುತ್ತಿದ್ದು ಎಸ್.ಶಂಕರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಭೂಪಾಲ್ನಲ್ಲಿ ಬೀಡುಬಿಟ್ಟಿದ್ದು ಪೀಟರ್ ಹೆಯಾನ್ ನಿರ್ದೇಶನದಲ್ಲಿ ಆ್ಯಕ್ಷನ್ ದೃಶ್ಯ ಚಿತ್ರೀಕರಿಸಲಾಗುತ್ತಿದೆ.