ಅತಿ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮಾಡಿದ ಕೆಲಸಗಳು ಹಾಗೂ ಸಿನಿಮಾಗಳು ಜನರನ್ನು ಕಾಡುತ್ತಲೇ ಇವೆ. ಸಂಚಾರಿ ವಿಜಯ್ ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗುತ್ತಿದೆ.
ಇದೊಂದು ಬಯೋಗ್ರಫಿ ಮಾದರಿಯಲ್ಲಿ ರೂಪುಗೊಂಡಿರುವ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದರೆ, ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ನೆನಪಿಸಿಕೊಂಡಿದ್ದಾರೆ.
ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ. ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ಮತ್ತು ಪತ್ರಕರ್ತ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿದೆ.
ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32 ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ.
ಜಿ.ಎನ್. ಮೋಹನ್ ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ. ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ.
ಓದಿ: ಧಾರಾವಾಹಿ ಮುಗಿಯುವವರೆಗೆ ನಾನೇ ಅನು ಸಿರಿಮನೆ: ಗೊಂದಲಕ್ಕೆ ತೆರೆ ಎಳೆದ ಮೇಘಾ ಶೆಟ್ಟಿ