ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನದ ನೋವು ಮರೆಯಾಗುತ್ತಿದ್ದಂತೆ ಇಂದು ಭಾರತೀಯ ಚಿತ್ರರಂಗ ರಿಷಿ ಕಪೂರ್ ಅವರನ್ನು ಕಳೆದುಕೊಂಡು ಶಾಕ್ಗೆ ಒಳಗಾಗಿದೆ. ನಾಯಕನಾಗಿ, ಪೋಷಕ ನಟನಾಗಿ ಮಿಂಚಿದ್ದ ರಿಷಿ ಕಪೂರ್ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ರಿಷಿ ಕಪೂರ್ ಅವರಿಗೆ ಸಿನಿಮಾ ಬಗ್ಗೆ ಎಷ್ಟು ವ್ಯಾಮೋಹ ಇತ್ತು ಎಂದರೆ, ಅನಾರೋಗ್ಯದ ಸಮಯದಲ್ಲೂ, 'ದಿ ಬಾಡಿ' ಎಂಬ ಸಿನಿಮಾಗಾಗಿ ಬಣ್ಣ ಹಚ್ಚಿದ್ದರು. ಜೀತ್ ಜೋಸೆಫ್ ನಿರ್ದೇಶನದ 'ದಿ ಬಾಡಿ' ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡಾ ನಟಿಸಿದ್ದರು. ಇದು ರಿಷಿ ಕಪೂರ್ ಅವರ ಕೊನೆಯ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುವ ಅವಕಾಶ ಸ್ಯಾಂಡಲ್ವುಡ್ನ ಹೆಸರಾಂತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರಿಗೆ ದೊರೆತಿತ್ತು. ಈ ವಿಚಾರವನ್ನು ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರೇ ಈ ಟಿವಿ ಭಾರತದೊಂದಿಗೆ ಹೇಳಿಕೊಂಡಿದ್ದಾರೆ.
ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಿಗೆ ಸ್ಟಂಟ್ ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್ಗೆ ರಿಷಿ ಕಪೂರ್ ಕೊನೆಯ ಚಿತ್ರ 'ದಿ ಬಾಡಿ' ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡುವ ಅವಕಾಶ ದೊರೆತಿತ್ತು. ಅವರೊಂದಿಗೆ ಕೆಲಸ ಮಾಡಿದ್ದೂ ನಿಜಕ್ಕೂ ಸಂತೋಷದ ವಿಚಾರ ಎನ್ನುತ್ತಾರೆ ಜಾಲಿ ಬಾಸ್ಟಿನ್. ಮಾರಿಷಸ್ನಲ್ಲಿ ಬರೋಬ್ಬರಿ 15 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿತ್ತಂತೆ. ಆ ಸಮಯದಲ್ಲಿ ರಿಷಿ ಕಪೂರ್ ಆರೋಗ್ಯ ಸರಿ ಇಲ್ಲದಿದ್ದರೂ, ಶೂಟಿಂಗ್ ಸೆಟ್ನಲ್ಲಿ ಅದನ್ನು ತೋರಿಸಿಕೊಳ್ಳದೆ ಬಹಳ ಎನರ್ಜಿಯಿಂದ ನಟಿಸುತ್ತಿದ್ದರಂತೆ.
ರಿಷಿ ಕಪೂರ್ ಅವರ ಬಳಿ ಜಾಲಿ ಬಾಸ್ಟಿನ್ ತಮ್ಮ ಪರಿಚಯ ಮಾಡಿಕೊಂಡಾಗ ತಾನೊಬ್ಬ ಸೊಡ್ಡ ಸ್ಟಾರ್ ಎನ್ನುವ ಅಹಂ ಇಲ್ಲದೆ ಬಹಳ ಸಿಂಪಲ್ ಆಗಿ ಜಾಲಿ ಬಾಸ್ಟನ್ ಜೊತೆ ಮಾತನಾಡಲು ಆರಂಭಿಸಿದ್ದಾರೆ. ಜಾಲಿ ಬಾಸ್ಟಿನ್ ಅವರನ್ನು ನೀವು ಕೂಡಾ ಏಕೆ ಹೀರೋ ಆಗಬಾರದು ಎಂದು ರಿಷಿ ಕಪೂರ್ ಕೇಳಿದ್ದಾರೆ. ಇಷ್ಟೇ ಅಲ್ಲ ಅವರೊಂದಿಗೆ ಕನ್ನಡ ಸಿನಿಮಾಗಳ ಬಗ್ಗೆ ಚರ್ಚಿಸುವ ವೇಳೆ ರಿಷಿ ಕಪೂರ್, ರವಿಚಂದ್ರನ್ ಅಭಿನಯದ 'ಪ್ರೇಮಲೋಕ' ಸಿನಿಮಾ ಬಗ್ಗೆ ಕೂಡಾ ಮಾತನಾಡಿದ್ದಾರೆ. 'ಪ್ರೇಮಲೋಕ' ಜಾಲಿ ಬಾಸ್ಟಿನ್ ಸ್ಟಂಟ್ ಕಂಪೋಸ್ ಮಾಡಿದ ಮೊದಲ ಚಿತ್ರ ಎನ್ನವುದು ಕೂಡಾ ವಿಶೇಷ. ರಿಷಿ ಕಪೂರ್ ಅಭಿನಯದ ಸೂಪರ್ ಹಿಟ್ ಚಿತ್ರ 'ಕರ್ಜ್' ಚಿತ್ರವನ್ನು ರವಿಚಂದ್ರನ್ ಕನ್ನಡದಲ್ಲಿ 'ಯುಗಪುರುಷ' ಆಗಿ ರಿಮೇಕ್ ಮಾಡಿದ್ದರು. ಹೀಗಾಗಿ ರಿಷಿ ಕಪೂರ್ ರವಿಚಂದ್ರನ್ ಬಗ್ಗೆ ಮಾತನಾಡಿದರು ಎಂದು ಜಾಲಿ ಬಾಸ್ಟಿನ್ ನೆನಪಿಸಿಕೊಂಡಿದ್ದಾರೆ.
ಅಂತಹ ನಟ ಇನ್ನಿಲ್ಲ ಎಂಬ ವಿಚಾರ ತಿಳಿದು ನನಗೆ ನಿಜಕ್ಕೂ ಶಾಕ್ ಆಯ್ತು ಎಂದು ಬೇಸರ ವ್ಯಕ್ತಪಡಿಸಿದರು ಜಾಲಿ ಬಾಸ್ಟಿನ್. ರಿಷಿ ಕಪೂರ್ ಚಿತ್ರದ ಒಂದು ಹಾಡನ್ನು ಹೇಳುವ ಮೂಲಕ ಅವರ ನಿಧನಕ್ಕೆ ಕಂಬನಿ ಮಿಡಿದರು. 2020ನೇ ವರ್ಷ ಬಹಳ ನೋವಿನ ಘಟನೆಗಳು ಜರುಗುತ್ತಿವೆ ಎಂದು ಬೇಸರಗೊಂಡ ಜಾಲಿ ಬಾಸ್ಟಿನ್, ಎಲ್ಲರೂ ಮನೆಯಲ್ಲಿರಿ, ಲಾಕ್ಡೌನ್ ಉಲ್ಲಂಘಿಸಬೇಡಿ ಎಂದು ಮನವಿ ಮಾಡಿದರು. ಒಟ್ಟಿನಲ್ಲಿ ಬಾಲಿವುಡ್ ಖ್ಯಾತ ನಟರೊಬ್ಬರ ಕೊನೆಯ ಚಿತ್ರಕ್ಕೆ ಸ್ಯಾಂಡಲ್ವುಡ್ ಸಾಹಸ ನಿರ್ದೇಶಕ ಫೈಟ್ ಕಂಪೋಸ್ ಮಾಡಿರುವುದು ಸಂತೋಷದ ವಿಚಾರ.