ಬಾಮೈದನನ್ನು ಚಿತ್ರರಂಗಕ್ಕೆ ಪರಿಚಯಿಸುವುದಾಗಿ ನಿರ್ದೇಶಕ ಪ್ರೇಮ್ ಬಹಳ ದಿನಗಳ ಹಿಂದೆ ಹೇಳಿದ್ದರು. ಅಂತೆಯೇ ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಬಾಮೈದನಿಗಾಗಿ ಒಂದು ಲವ್ ಸ್ಟೋರಿ ರೆಡಿ ಮಾಡಿಕೊಂಡು ಪ್ರೇಮ್ ಗಾಂಧಿನಗರಕ್ಕೆ ಕರೆತಂದಿದ್ದಾರೆ.
ನಿನ್ನೆ ರಕ್ಷಿತ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಲಾಂಚ್ ಮಾಡಲಾಗಿದೆ. ಕ್ರೇಜಿಕ್ವೀನ್ ರಕ್ಷಿತ ಸಹೋದರ ಅಭಿಷೇಕ್ ರಾವ್ ಇದೀಗ 'ರಾಣಾ' ಎಂದು ಹೆಸರು ಬದಲಿಸಿಕೊಂಡು ಸ್ಟೈಲಾಗಿ ಗಟ್ಟ ಬಿಟ್ಟು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ರಕ್ಷಿತ ಫಿಲಮ್ ಫ್ಯಾಕ್ಟರಿ ಅಡಿ ನಿರ್ಮಾಣ ಮಾಡಲಾಗುತ್ತಿದೆ. ರಾಣಾ ಸಿನಿಮಾಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಭಾವನ ಜೊತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹಾಸನದಲ್ಲಿ ಜರುಗಿದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಚಿತ್ರಕಥೆಯನ್ನು ರೆಡಿ ಮಾಡಲಾಗಿದೆ. ಚಿತ್ರಕ್ಕೆ 'ಏಕ್ ಲವ್ ಯಾ' ( ಮತ್ತೊಂದು ಆ್ಯಂಗಲ್ನಲ್ಲಿ ಏಕಲವ್ಯ )ಎಂದು ಹೆಸರಿಡಲಾಗಿದ್ದು ರಘು ಕೂವಿ ಚಿತ್ರಕಥೆ ಬರೆದಿದ್ದಾರೆ. 'ಎಕ್ಸ್ಕ್ಯೂಸ್ ಮಿ' ಚಿತ್ರದ ನಂತರ ಮತ್ತೆ ಪ್ರೇಮ್ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆಯುತ್ತಿದ್ದಾರೆ ಎನ್ನಲಾಗಿದೆ. ಈ ಬಾರಿ ಪ್ರೇಮ್ ಹೊಸ ತಂಡದೊಂದಿದೆ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು ರಾಣಾಗೆ ಕನ್ನಡದ ಹುಡುಗಿಯನ್ನು ನಾಯಕಿಯಾಗಿ ಕರೆತರುತ್ತಿದ್ದಾರಂತೆ ಪ್ರೇಮ್.
![ek love ya](https://etvbharatimages.akamaized.net/etvbharat/images/ek-love-ya_193_0104newsroom_00220_1107.jpeg)