ಆಟೋ ಡ್ರೈವರ್, ಕ್ಯಾಬ್ ಡ್ರೈವರ್ ಸೇರಿ ನಿರ್ಮಿಸಿರುವ 'ಸ್ಟಾರ್ ಕನ್ನಡಿಗ' ಸಿನಿಮಾ ಇಂದು ಬಿಡುಗಡೆಯಾಗಿದೆ. ಇದೇ ರೀತಿ ಬಹಳ ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಆಟೋ ಚಾಲಕರೊಬ್ಬರು ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.
ಆನಂದ್ ಎಂಬ ಆಟೋ ಚಾಲಕ ಇದೀಗ ಚಿತ್ರರಂಗಕ್ಕೆ ಬಂದಿದ್ದು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಜನುಮದ ಜಾತ್ರೆ' ಚಿತ್ರದ ಆಡಿಯೋ ಇಂದು ಬಿಡುಗಡೆಯಾಗಿದೆ. ಮಲ್ಲೇಶ್ವರಂನ ಎಸ್ಆರ್ವಿ ಸಭಾಂಗಣದಲ್ಲಿ ನಡೆದ ಆಡಿಯೋ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಸಿನಿಮಾ ಮೇಲಿನ ಮೋಹದಿಂದ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಆನಂದ್. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿದ್ದು ಸೆನ್ಸಾರ್ ಮಂಡಳಿ ಕದ ತಟ್ಟಲು ರೆಡಿಯಾಗಿದೆ. ಜೀವನದಲ್ಲಿ ಸೋಲು-ಗೆಲುವು ಎರಡು ಯಾವಾಗಲೂ ನಮ್ಮ ಜೊತೆಗಿರುತ್ತವೆ. ಸೋತಾಗ ಕುಗ್ಗಬಾರದು, ಗೆದ್ದಾಗ ಬೀಗಬಾರದು ಎಂಬ ಅಂಶ ಹೊಂದಿರುವ ಸಿನಿಮಾ ಇದು.
ಮದನ್ ಕುಮಾರ್ ಈ ಚಿತ್ರದಲ್ಲಿ ಹಳ್ಳಿ ಯುವಕನ ಪಾತ್ರದ ನಾಯಕನಾಗಿ ನಟಿಸಿದ್ದಾರೆ. ಎರಡನೇ ನಾಯಕನ ಪಾತ್ರದಲ್ಲಿ ಮಂಡ್ಯ ಕೆಂಪ ಎಂಬುವರು ನಟಿಸಿದ್ದಾರೆ. ನಾಯಕ ಮದನ್ ಕುಮಾರ್ ತಂದೆಯೇ ಮಗನ ಸಿನಿಮಾ ಪ್ರೀತಿಗೆ ಸೋತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಚಿತ್ರ ಹಾಗೂ ಅಂಜಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿನು ಮನಸ್ಸು ಸಂಗೀತ ನೀಡಿದ್ದಾರೆ. ಮಂಡ್ಯ, ಮಹದೇಶ್ವರ ಬೆಟ್ಟ, ತುಮಕೂರು ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.