ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳು ಕೂಡಾ ತಯಾರಾಗುತ್ತಿವೆ. ಇಂತಹ ಸಿನಿಮಾಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡಾ ಬಾಚಿಕೊಳ್ಳುತ್ತಿವೆ.
ಬುದ್ಧಿಮಾಂದ್ಯ ಮಕ್ಕಳ ಕಥಾಹಂದರ ಹೊಂದಿರುವ 'ಜ್ಞಾನಂ' ಎಂಬ ಸಿನಿಮಾವೊಂದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಗೂ ಮುನ್ನವೇ ಯುಎಸ್ಎ 'ಇಂಡಿ ಫೆಸ್ಟ್ ಫಿಲ್ಮ್ ಅವಾರ್ಡ್ಸ್' ನಲ್ಲಿ ಭಾಗವಹಿಸಿ ಉತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಕೋಲ್ಕತ್ತಾ ಫಿಲ್ಮ್ ಫೆಸ್ಟಿವಲ್ನಲ್ಲಿ 'ಅಚೀವ್ಮೆಂಟ್ ಅವಾರ್ಡ್' ಕೂಡಾ ಪಡೆದುಕೊಂಡಿದೆ. ಚಿತ್ರತಂಡ ಈ ಖುಷಿಯನ್ನು ಹಂಚಿಕೊಳ್ಳಲು ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಂದಿತ್ತು. ನಿರ್ದೇಶಕ ವರದರಾಜ್, ಮಕ್ಕಳಾದ ಧ್ಯಾನ್, ಲೋಹಿತ್ ಹಾಗೂ ಹಿರಿಯ ನಟ ಸುದರ್ಶನ್ ಪತ್ನಿ ಶೈಲಶ್ರೀ ಈ ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವರದರಾಜ್ ವೆಂಕಟಸ್ವಾಮಿ ಎಂಬುವವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಅವರ ಪೋಷಕರು ಪಡುವ ನೋವು-ಅವಮಾನಗಳನ್ನು ಕಣ್ಣಾರೆ ಕಂಡಿರುವ ವರದರಾಜ್, ಇದೇ ಎಳೆಯನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ. ಬುದ್ಧಿಮಾಂದ್ಯ ಮಗುವಿನ ಪಾತ್ರವನ್ನು ಧ್ಯಾನ್ ಎಂಬ ಬಾಲಕ ನಿರ್ವಹಿಸಿದ್ದರೆ, ಬುದ್ಧಿವಂತ ಹುಡುಗನಾಗಿ ಲೋಹಿತ್ ಅಭಿನಯಿಸಿದ್ದಾರೆ. ಹಿರಿಯ ನಟಿ ಶೈಲಶ್ರೀ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಂತೋಷ್ ಕುಮಾರ್, ರಾಧಿಕಾ ಶೆಟ್ಟಿ, ಆಶಾ ಸುಜಯ್, ಜ್ಯೋತಿ ಮರೂರು ಹಾಗೂ ಇನ್ನಿತರರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ವಸಂತ ಸಿನಿ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಸಿ.ವೇಣು ಭಾರಧ್ವಾಜ್, ರಾಜು ಭಾರಧ್ವಾಜ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನಿರ್ಮಾಪಕ ವೇಣು ಈ ಚಿತ್ರದಲ್ಲಿ ಬುದ್ಧಿಮಾಂದ್ಯ ಮಗುವಿನ ತಂದೆಯಾಗಿ ಅಭಿನಯಿಸಿದ್ದಾರೆ. ರೋಹಿತ್ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು ಹಾಗೂ ಎರಡು ಬಿಟ್ಸ್ ಚಿತ್ರದಲ್ಲಿ ಇದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಇಷ್ಟೆಲ್ಲಾ ವಿಶೇಷತೆ ಇರುವ 'ಜ್ಞಾನಂ' ಸಿನಿಮಾ ಆಡಿಯೋವನ್ನು ಲಹರಿ ವೇಲು ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ.