ಮಲಯಾಳಿ ಆಗಿದ್ದರೂ ಕನ್ನಡ ಕಲಿತು ಪುನೀತ್ ರಾಜ್ ಕುಮಾರ್ ಅಭಿನಯದ ‘ಪೃಥ್ವಿ’ ಸಿನಿಮಾವನ್ನು ನಿರ್ದೇಶಿಸಿದ್ದ ಜೇಕಬ್ ವರ್ಗೀಸ್ ಈಗ ಎರಡು ಯಶಸ್ವಿ ಸಿನಿಮಾಗಳ ನಾಯಕ ರಿಷಿ ಹಾಗೂ ರೆಬಾ ಮೋನಿಕಾ ಜಾನ್ ಅಭಿನಯದ ‘ಸಕಲ ಕಲಾ ವಲ್ಲಭ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವನ್ನು ನ.29 ಅಥವಾ ಡಿ.06 ರಂದು ಬಿಡುಗಡೆ ಮಾಡಲು ನಿಶ್ಚಯಿಸಿದ್ದಾರೆ.
ಜೇಕಬ್ ವರ್ಗೀಸ್ ಅವರು ಸಿನಿಮಾ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದು, ಅವರ ನಿರ್ದೆಶನದ ಹಿಂದಿನ ಸಿನಿಮಾ ‘ಚಂಬಲ್’ ಸಿನಿಮಾವನ್ನು ಡಿಜಿಟಲ್ ಮಾರುಕಟ್ಟೆ ಒಳ್ಳೆಯ ಮೊತ್ತಕ್ಕೆ ಖರೀದಿಸಲು ಮುಂದಾಗಿತ್ತು. ಆದರೆ ಅದನ್ನು ತಿರಸ್ಕರಿಸಿ ನನ್ನ ಸಿನಿಮಾ ಜನರಿಗಾಗಿ ಮಾಡಿರುವುದು. ಹಾಗಾಗಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಆಗಬೇಕು ಎಂದು ಹಠಕ್ಕೆ ಬಿದ್ದಿದ್ದರು. ಆದರೆ ಸಿನಿಮಾ ಗಳಿಕೆಯಲ್ಲಿ ಮುಗ್ಗರಿಸಿತ್ತು. ಆ ವಿಷ್ಯದಲ್ಲಿ ನೋವಿದ್ದರೂ, ನನ್ನ ಸಿನಿಮಾ ಪಯಣ ಮುಂದುವರೆಯುತ್ತೆ ಎನ್ನುತ್ತಾರೆ ವರ್ಗೀಸ್.
ಸದ್ಯಕ್ಕೆ ‘ಸಕಲ ಕಲಾ ವಲ್ಲಭ’ ಬಗ್ಗೆ ಜೇಕಬ್ ವರ್ಗೀಸ್ ಗಮನ ಹರಿಸಿದ್ದು, ಈ ಚಿತ್ರದಲ್ಲಿ ನಾಯಕನಾಗಿ ‘ಆಪರೇಷನ್ ಅಲಮೇಲಮ್ಮ’ ಹಾಗೂ ‘ಕವಲು ದಾರಿ’ ಯಿಂದ ಯಶಸ್ಸು ಕಂಡಿರುವ ರಿಷಿ ನಟಿಸಿದ್ದು, ರೆಬಾ ಮೋನಿಕಾ ಜಾನ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಿಬಾ ಮಲಯಾಳಂ ಭಾಷೆಯಲ್ಲಿ ‘ಜಾಕೋಬಿಂಟೆ ಸ್ವರ್ಗ ರಾಜ್ಯಂ’ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಹೊಂದಿದ್ದಾರೆ. ಇನ್ನು ಈ ಚಿತ್ರಕ್ಕೆ ಧನುಷ್ ಪ್ರೊಡಕ್ಷನ್ ಹಾಗೂ ವಂಡರ್ ಬಾರ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ.