2007ರಲ್ಲಿ ತೆರೆಕಂಡ 'ದುನಿಯಾ' ಸಿನಿಮಾದಿಂದ ಮಿಂಚಿದವರು ನಟಿ ರಶ್ಮಿ. ಇಂದಿಗೂ ಆ ಸಿನಿಮಾದ ಇಮೇಜ್ ಅವರ ವೃತ್ತಿ ಜೀವನವನ್ನು ತೂಗುತ್ತ ಬಂದಿದೆ. ಕಳೆದ ವರ್ಷ ಇವರು ಅಭಿನಯಿಸಿದ್ದ 'ಪ್ರೀತಿ ಕಿತಾಬು' ಹಾಗೂ 'ಅಸ್ತಿತ್ವ' ಸಿನಿಮಾಗಳು ಬಿಡುಗಡೆ ಆಗಿದ್ವು. ನಂತರ ಅರುಂಧತಿ, ನಮಗಾಗಿ ಹಾಗೂ ಸ್ವರ್ಣಾಂಜಲಿ ಸಿನಿಮಾಗಳನ್ನು ಒಪ್ಪಿದರೂ ಎಂಬ ಸುದ್ದಿ ಸಹ ಇತ್ತು. ಆದರೆ, ಅವರ ಸದ್ಯದ ಸಿನಿಮಾದ ಶಿರ್ಷಿಕ ‘ಜಗ್ಗಿ ಜಗನ್ನಾಥ್’ ಎಂದು ನಾಮಕರಣ ಆಗಿದೆ.
ಕನ್ನಡದಲ್ಲಿ 100 ಸಿನಿಮಾಗಳ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ಈ ಚಿತ್ರವನ್ನು ಪಕ್ಕಾ ಆ್ಯಕ್ಷನ್, ಲವ್, ಕಮರ್ಷಿಯಲ್ ದಾಟಿಯಲ್ಲಿ, ಭೂಗತಲೋಕದ ವಿಷಯ ಸಹ ಅಡಗಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಿಂದ ಲಿಖಿತ್ ರಾಜ್ ಎಂಬ ಯುವಕನನ್ನು ಚಂದನವನಕ್ಕೆ ಪರಿಚಯಿಸುತ್ತಿದ್ದಾರೆ. ಪೇಪರ್ ಆಯುವ ಸಾಮಾನ್ಯ ಹುಡುಗ ಅಘೋರಿ ಆಗುವ ಕಥಾ ವಸ್ತು ಈ ಚಿತ್ರದ ಒಂದು ಎಳೆ.
‘ಜಗ್ಗಿ ಜಗನ್ನಾಥ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಶ್ರೀ ಮೈಲಾರ ಲಿಂಗೇಶ್ವರ ಮೂವಿ ಅಡಿಯಲ್ಲಿ ಹೆಚ್ ಜಯರಾಜು, ಜಿ ಶಾರದ ಚಿತ್ರಕ್ಕೆ ಹಣ ಹೂಡಿದ್ದಾರೆ. ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ, ಸಾಯಿ ಸರ್ವೇಶ್ ಗೀತ ಸಾಹಿತ್ಯ ಒದಗಿಸಿದ್ದಾರೆ. ಶ್ರೀನಿವಾಸ್.ಪಿ.ಬಾಬು ಸಂಕಲನ, ಅರವಿಂದ್ ಡಿಸ್ಕೋ ಡಿ ಸಿಲ್ವ ನೃತ್ಯ, ಜಾನಿ, ಕೌರವ ವೆಂಕಟೇಶ್ ಅವರ ಸಾಹಸವಿದೆ.
ಪೋಷಕ ಪಾತ್ರಗಳಲ್ಲಿ ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ, ಪವನ್, ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಹಾಗೂ ಇತರರಿದ್ದಾರೆ.