ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹೈ ವೋಲ್ಟೇಜ್ ಸಿನಿಮಾ ಜೇಮ್ಸ್. ಸದ್ಯ ಪೋಸ್ಟರ್ನಿಂದಲೇ ಅಭಿಮಾನಿಗಳಲ್ಲಿ ಬೆಟ್ಟದಷ್ಟು ಕುತೂಹಲ ಹುಟ್ಟಿಸಿರುವ ಈ ಸಿನಿಮಾದ ಚಿತ್ರೀಕರಣ ಮುಗಿಯುವಷ್ಟರಲ್ಲಿ ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ಹೊಂದಿರುವುದು ದುರಾದೃಷ್ಟಕರ. ಹೀಗಾಗಿ ಪುನೀತ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡೋದಕ್ಕೆ ಆಗಿರಲಿಲ್ಲ.
ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಸಹೋದರ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡ್ತಾರೆ ಅಂತಾ ಹೇಳಲಾಗ್ತಿತ್ತು. ಆದರೆ ಪಕ್ಕಾ ಆಗಿರಲಿಲ್ಲ. ಇದೀಗ ಕೊನೆಗೂ ಅಪ್ಪು ಪಾತ್ರಕ್ಕೆ ಶಿವರಾಜ್‌ಕುಮಾರ್ ಡಬ್ಬಿಂಗ್ ಮಾಡಿದ್ದಾರೆ.
ಎರಡೂವರೆ ದಿನಗಳ ಕಾಲ ಜೇಮ್ಸ್ ಚಿತ್ರಕ್ಕೆ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಶಿವರಾಜ್ ಕುಮಾರ್, ಅಪ್ಪು ಮುಖ ನೋಡಿಕೊಂಡು ಅಣ್ಣನಾಗಿ ಡಬ್ ಮಾಡೋದು ಬಹಳ ಕಷ್ಟ ಆಗಿತ್ತು. ಎಲ್ಲರೂ ಸೇರಿ ಕೇಳಿದಾಗ, ನಾನು ಮಾಡಲ್ಲ ಅಂತ ಹೇಗೆ ಹೇಳಲಿ? ಹಾಗಾಗಿ ಪ್ರಯತ್ನಿಸಿದೆ. ಎರಡೂವರೆ ದಿನದಲ್ಲಿ ಡಬ್ಬಿಂಗ್ ಮುಗಿಸಿದ್ದೇನೆ. ಅವನ ವಾಯ್ಸ್ ಜೊತೆಗೆ ಮ್ಯಾಚ್ ಮಾಡೋದಕ್ಕೆ ಬಹಳ ಕಷ್ಟ. ಆದರೂ ಏನೋ ಒಂದು ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗಬಹುದು ಅಂತ ಅಂದುಕೊಂಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಸಂದೇಶ್ ಪ್ರೊಡಕ್ಷನ್ಸ್‌ನಲ್ಲಿ ಕರುನಾಡ ಚಕ್ರವರ್ತಿಯ ಹೊಸ ಸಿನಿಮಾ
ಇನ್ನೊಬ್ಬ ನಟನ ಹಾಗೆ ಡಬ್ಬಿಂಗ್ ಮಾಡೋದು ಕಷ್ಟ. ನನ್ನ ಸಿನಿಮಾದ ಡಬ್ಬಿಂಗ್ಅನ್ನು ನಾನು ಸುಲಭವಾಗಿ ಮಾಡಿ ಬಿಡಬಹುದು ಅಂತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಜೇಮ್ಸ್ ಚಿತ್ರದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವ್ರನ್ನ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ. ಭರ್ಜರಿ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ಸದ್ಯ ಪೋಸ್ಟರ್ನಿಂದಲೇ ಹವಾ ಸೃಷ್ಟಿಸಿರೋ ಜೇಮ್ಸ್ ಸಿನಿಮಾ ಅಂದುಕೊಂಡಂತೆ ಮಾರ್ಚ್ 17ರಂದು ಬಿಡುಗಡೆ ಆಗಲಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ