ಲಾಕ್‍ಡೌನ್ ತೆರವಾಗಿ ಬೇರೆ ನಿರ್ದೇಶಕರೆಲ್ಲಾ ಚಿತ್ರೀಕರಣ ಪ್ರಾರಂಭಿಸಿದರೂ, ಪವನ್ ಒಡೆಯರ್ ಮಾತ್ರ ಸ್ಥಗಿತಗೊಂಡಿದ್ದ 'ರೇಮೊ' ಚಿತ್ರದ ಕೆಲಸಗಳನ್ನು ಮುಂದುವರೆಸಿರಲಿಲ್ಲ. ಇದೀಗ ಸಿನಿಮಾದ ಕೆಲಸಗಳು ಪ್ರಾರಂಭವಾಗಿದ್ದು, ಈ ಮಧ್ಯೆ ಚಿತ್ರತಂಡದಿಂದ ಹೊಸದೊಂದು ಸುದ್ದಿ ಬಂದಿದೆ. 'ರೇಮೊ' ಸಿನಿಮಾ ಕನ್ನಡ ಮಾತ್ರವಲ್ಲ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೂಡಾ ಬಿಡುಗಡೆ ಆಗಲಿದೆಯಂತೆ.
'ರೇಮೊ' ಪ್ರಾರಂಭವಾದಾಗ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಚಿತ್ರವನ್ನು ಇನ್ನೂ ಎರಡು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಇದಕ್ಕೆ ಕಾರಣ ಕೂಡಾ ಇದೆ. ನಾಯಕ ಇಶಾನ್ ಅಭಿನಯದ ಮೊದಲ ಚಿತ್ರ 'ರೋಗ್' ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಆ ಚಿತ್ರವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. 'ರೋಗ್' ಚಿತ್ರದ ತೆಲುಗು ಅವತರಣಿಕೆ ಟಿವಿಯಲ್ಲಿ ಪ್ರಸಾರವಾಗಿ, ಇಶಾನ್‍ಗೆ ಸಾಕಷ್ಟು ಅಭಿಮಾನಿಗಳು ಕೂಡಾ ದೊರೆತಿದ್ದಾರಂತೆ. ಹಾಗಾಗಿ ಈಗ 'ರೇಮೊ' ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ. ತೆಲುಗಿನಲ್ಲಿ ಡಬ್ ಆಗುತ್ತಿರುವಾಗ, ತಮಿಳಿನಲ್ಲೂ ಯಾಕೆ ಮಾಡಬಾರದು ಎಂಬ ಯೋಚನೆ ಬಂದು ತಮಿಳಿನಲ್ಲೂ ಡಬ್ ಮಾಡಲಾಗುತ್ತಿದೆಯಂತೆ.
'ರೇಮೊ' ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು 10 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ. ಪ್ರೀತಿ, ಸಂಬಂಧಗಳ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು ಈ ಸಿನಿಮಾಗೆ ಪವನ್ ಒಡೆಯರ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಇಶಾನ್‍ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ತಮಿಳಿನ ಜನಪ್ರಿಯ ನಟ ಶರತ್ ಕುಮಾರ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ.