ತಮ್ಮ ಸಂಗೀತದಿಂದ ಕೋಟ್ಯಂತರ ಸಂಗೀತಪ್ರಿಯರನ್ನು ರಂಜಿಸಿರುವ ಸಂಗೀತ ಬ್ರಹ್ಮ ಇಳಯರಾಜ 1943 ಜೂನ್ 2 ರಂದು ಜನಿಸಿದರು. ಸಂಗೀತ ಪ್ರೇಮಿಗಳು, ಚಿತ್ರರಂಗದ ಗಣ್ಯರು ಪ್ರತಿವರ್ಷ ಇಳಯರಾಜ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಬಂದಿದ್ದಾರೆ.
![Ilaiyaraaja changed his birth date for June 3](https://etvbharatimages.akamaized.net/etvbharat/prod-images/ilayaraja-laugh1591238069682-88_0406email_1591238081_825.jpg)
ಆದರೆ ನನ್ನ ಹುಟ್ಟುಹಬ್ಬ ಜೂನ್ 2 ರಂದು ಅಲ್ಲ, ಜೂನ್ 3 ಎಂದು ಇಳಯರಾಜ ಹೇಳಿಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ..? ತಮಿಳುನಾಡು ಮಾಜಿ ಮುಖ್ಯಮಂತ್ರಿ, ದಿವಂಗತ ಕರುಣಾನಿಧಿ ಅವರ ಜನ್ಮದಿನ ಜೂನ್ 3. ಆದ್ದರಿಂದ ಅವರು ಜನಿಸಿದ ದಿನವೇ ನನ್ನ ಜನ್ಮದಿನ ಎಂದು ಹೇಳಿಕೊಂಡಿದ್ದಾರೆ. ಇದು ಕರುಣಾನಿಧಿ ಅವರಿಗೆ ಇಳಯರಾಜ ಅವರು ಸಲ್ಲಿಸುತ್ತಿರುವ ಗೌರವ ಎನ್ನಲಾಗಿದೆ.
![Ilaiyaraaja changed his birth date for June 3](https://etvbharatimages.akamaized.net/etvbharat/prod-images/02:38_tn-che-01-seenuramasamy-wishes-script-7204954_02062020142346_0206f_1591088026_435.jpg)
ದೇಶ ಕಂಡ ಅದ್ಭುತ ಸಂಗೀತ ನಿರ್ದೇಶಕ ಇಳಯರಾಜ 1000 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಜೂನ್ 3 ರಂದು ಕರುನಾನಿಧಿ ಹಾಗೂ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಹುಟ್ಟುಹಬ್ಬ. ಆದ್ದರಿಂದ ಅದೇ ದಿನ ನನ್ನ ಜನ್ಮದಿನ ಎಂದು ಸ್ವತ: ಇಳಯರಾಜ ಹೇಳಿಕೊಂಡಿದ್ದಾರೆ. ವಿಶೇಷ ಎಂದರೆ ಮಣಿರತ್ನಂ ಹಾಗೂ ಇಳಯರಾಜ ಇಬ್ಬರೂ ಕನ್ನಡ ಚಿತ್ರರಂಗದಿಂದ ತಮ್ಮ ಕರಿಯರ್ ಆರಂಭಿಸಿದವರು.
![Ilaiyaraaja changed his birth date for June 3](https://etvbharatimages.akamaized.net/etvbharat/prod-images/ilayaraja-speaking-at-prasad-audio1591238069682-33_0406email_1591238081_676.jpg)
ಮಣಿರತ್ನಂ ಕನ್ನಡದ 'ಪಲ್ಲವಿ ಅನುಪಲ್ಲವಿ' ಚಿತ್ರದಿಂದ ನಿರ್ದೇಶಕನಾಗಿ ಕರಿಯರ್ ಆರಂಭಿಸಿದರೆ, ಇಳಯರಾಜ ಅವರು ಜಿ.ಕೆ. ವೆಂಕಟೇಶ್ ಅವರ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದರು. 'ಪಲ್ಲವಿ ಅನುಪಲ್ಲವಿ' ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದರೆ ಆ ಚಿತ್ರದ ಹಾಡುಗಳಿಗೆ ಇಳಯರಾಜ ಸಂಗೀತ ನೀಡಿದ್ದಾರೆ. ಈಗ ಇಬ್ಬರೂ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಒಬ್ಬರು ವಿಷುವಲ್ ಮ್ಯಾಜಿಶಿಯನ್ ಆದರೆ ಇನ್ನೊಬ್ಬರು ಸಂಗೀತ ಬ್ರಹ್ಮ.
![Ilaiyaraaja changed his birth date for June 3](https://etvbharatimages.akamaized.net/etvbharat/prod-images/ilayaraja-161591238069681-58_0406email_1591238081_236.jpg)
ಇನ್ನು ಕರುಣಾನಿಧಿ ಅವರು ಇಳಯರಾಜ ಅವರಿಗೆ 'ಇಸೈಜ್ಞಾನಿ' ಎಂದು ಬಿರುದು ನೀಡಿದ್ದರು. ಅವರ ಮೇಲಿನ ಗೌರವಕ್ಕೆ ಜೂನ್ 2 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳದೆ, ಬಹಳ ವರ್ಷಗಳಿಂದ ಜೂನ್ 3 ರಂದು ಆಚರಿಸಿಕೊಳ್ಳುತ್ತಿದ್ದಾರೆ.