ಹೈದರಾಬಾದ್ನ ಪಶುವೈದ್ಯೆ ದಿಶಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರೂ ಇಂತಹ ದುರ್ಘಟನೆಗಳು ಮರುಕಳಿಸುತ್ತಲೇ ಇವೆ.
ದೇಶದಲ್ಲಿ ನಡೆಯುವ ಕೆಲ ನೈಜ ಘಟನೆಗಳನ್ನು ಆಧರಿಸಿ ಎಷ್ಟೋ ಸಿನಿಮಾಗಳು ತಯಾರಾಗಿವೆ. ಇದೀಗ ದಿಶಾ ಪ್ರಕರಣದ ಸ್ಫೂರ್ತಿಯಾಗಿರಿಸಿಕೊಂಡು ಕನ್ನಡದಲ್ಲಿ 'ಹುಡುಕಾಟ' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ 'ಪ್ರತಿ ನಿಮಿಷ ಹೋರಾಟ' ಎಂಬ ಟ್ಯಾಗ್ಲೈನ್ ಇದೆ. ಇಂದು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಶಿವಶಂಕರ್ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ನಂತರ ಮಾತನಾಡಿದ ಅವರು, ಪಕ್ಕದ ರಾಜ್ಯದಿಂದ ಬೆಂಗಳೂರಿಗೆ ಬಂದು ಸಿನಿಮಾ ಮಾಡುತ್ತಿರುವ ರವಿ ಮುಲಕಪಲ್ಲಿ ಅವರಿಗೆ ಶುಭ ಕೋರಿದರು.
'ಹುಡುಕಾಟ' ಚಿತ್ರವನ್ನು ಆಂಧ್ರಪ್ರದೇಶದ ರವಿ ಮುಲಕಪಲ್ಲಿ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಜತೆಗೆ ಚಿತ್ರದ ಹಾಡುಗಳಿಗೆ ಸಂಗೀತ ಕೂಡಾ ನೀಡಿದ್ದಾರೆ. ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಹೇಳಲು ಹೊರಟಿರುವ ರವಿ, ಈ ಚಿತ್ರಕ್ಕಾಗಿ ಆಂಧ್ರದ ಅಭಿಷೇಕ್ ಎನ್ನಲುರಿ ಹಾಗೂ ಕನ್ನಡದ ಪ್ರಜ್ವಲ್ ಕುಮಾರ್ ಎಂಬ ಇಬ್ಬರು ನಟರನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಕರೆ ತಂದಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು ಕೂಡಾ ಇದ್ದು ತೆಲುಗು ಹುಡುಗಿ ಮಧುಪ್ರಿಯ ಹಾಗೂ ಪೂಜಿತ ನಟಿಸುತ್ತಿದ್ದಾರೆ. ಮುಂದಿನ ವಾರದಿಂದ ಕರ್ನಾಟಕ ಹಾಗೂ ಆಂಧ್ರದಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.