ಸಿನಿಮಾ ಅನ್ನೋದು ಒಂದು ಮನರಂಜನೆಯಷ್ಟೇ ಅಲ್ಲ, ಅದೊಂದು ಸಮಾಜದಲ್ಲಿನ ಪ್ರಭಾವಿ ಮಾಧ್ಯಮ. ಈ ಮಾತಿಗೆ ಪೂರಕವಾಗಿ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ ಇದೆ.
ಸೈಬರ್ ಕ್ರೈಮ್ ಕಥೆ ಆಧರಿಸಿರೋ 100 ಸಿನಿಮಾ ಇದೇ ನವೆಂಬರ್ 19ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಬಿಡುಗಡೆ ಮುಂಚೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸೈಬರ್ ಕ್ರೈಮ್ ಅಧಿಕಾರಿಗಳಾದ ಸಿಒಡಿ ಹಾಗೂ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಸೇರಿದಂತೆ ಕೆಲ ಅಧಿಕಾರಿಗಳು ಮಾಲ್‌ವೊಂದರಲ್ಲಿ 100 ಸಿನಿಮಾವನ್ನ ನೋಡಿದರು.
ಈ ಸಿನಿಮಾ ನೋಡಿ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಟರಾದ ರಮೇಶ್ ಅರವಿಂದ್ ಒಳ್ಳೆ ಸಿನಿಮಾ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಸದಾ ಮುಳಗಿರುತ್ತೆ.
ಇದರಿಂದ ಏನೆಲ್ಲಾ ತೊಂದರೆ ಆಗುತ್ತೆ ಅನ್ನೋದನ್ನ ನಿರ್ದೇಶಕ ರಮೇಶ್ ಅರವಿಂದ್ 100 ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರಾಧ ಜಗತ್ತನ್ನ ಮಟ್ಟ ಹಾಕೋದಕ್ಕೆ ಸಿನಿಮಾ ಬಹಳ ಸಹಕಾರಿಯಾಗಲಿದೆ ಅಂತಾ ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘಿಸಿದರು. ಗೃಹ ಸಚಿವರ ಜೊತೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಹಾಗೂ ಸಿಒಡಿ ಅಧಿಕಾರಿಗಳು 100 ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್, ನಿರ್ಮಾಪಕ ಎಂ ರಮೇಶ್ ರೆಡ್ಡಿ ಹಾಗೂ ನಟಿ ಪೂರ್ಣ ಸೇರಿದಂತೆ ಇಡೀ ಚಿತ್ರತಂಡ ಗೃಹ ಸಚಿವರಿಗೆ ಸಾಥ್ ನೀಡಿತು.
ರಮೇಶ್ ಅರವಿಂದ್ ಮಾತನಾಡಿ, 100 ಸಿನಿಮಾವನ್ನ, ಗೃಹ ಸಚಿವರು ನೋಡಿ ಮೆಚ್ಚಿಕೊಂಡಿರೋದು ಬಹಳ ಸಂತೋಷ ಆಗುತ್ತಿದೆ ಅಂದರು. ಸಂದೇಶ ಇರುವ ಚಿತ್ರವನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ಎಂ ರಮೇಶ್ ರೆಡ್ಡಿ ಮಾತನಾಡಿ, ಹೋಂ ಮಿನಿಸ್ಟರ್ ಹಾಗು ಸೈಬರ್ ಕ್ರೈಂ ಅಧಿಕಾರಿಗಳು ಬಂದು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಕೃತಜ್ಞತೆಗಳನ್ನ ಸಲ್ಲಿಸಿದರು.