ಇಂದು ಜುಲೈ 4, ಖ್ಯಾತ ನಿರ್ದೇಶಕ ಹೆಚ್.ಎಲ್.ಎನ್ ಸಿಂಹ ಅವರು ನಿಧನರಾದ ದಿನ. ನಟಸಾರ್ವಭೌಮ ಡಾ. ರಾಜ್ಕುಮಾರ್ ಅಭಿನಯದ ಮೊದಲ ಸಿನಿಮಾ 'ಬೇಡರ ಕಣ್ಣಪ್ಪ' ನಿರ್ದೇಶನ ಮಾಡಿದ್ದು ಇವರೇ.
ಜುಲೈ 25,1904 ಹೆಚ್.ಎಲ್.ಎನ್. ಸಿಂಹ ಹುಟ್ಟಿದ ದಿನ. ಹೆಸರಿಗೆ ಮಾತ್ರವಲ್ಲ ಇವರು ವ್ಯಕ್ತಿತ್ವದಲ್ಲೂ ಸಿಂಹವೇ ಆಗಿದ್ದರು. ರಾಷ್ಟ್ರಕವಿ ಕುವೆಂಪು ಅವರ ಸಹಪಾಠಿ ಆಗಿದ್ದ ಹೆಚ್.ಎಲ್.ಎನ್. ಸಿಂಹ ಡಾ. ರಾಜ್ಕುಮಾರ್ ಅವರನ್ನು ಒಂದು ನಾಟಕದಲ್ಲಿ ನೋಡಿ 'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡರು. 1954 ರಲ್ಲಿ ಬಿಡುಗಡೆ ಆದ 'ಬೇಡರ ಕಣ್ಣಪ್ಪ' ಹಲವಾರು ದಾಖಲೆಗಳನ್ನು ನಿರ್ಮಿಸಿತು. ಕೇಂದ್ರ ಸರ್ಕಾರದ ಪ್ರೆಸಿಡೆಂಟ್ ಪ್ರಶಸ್ತಿ ಕೂಡಾ ಪಡೆದ ಸಿನಿಮಾ ಇದು.
ಸ್ಯಾಂಡಲ್ವುಡ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಚ್.ಎಲ್.ಎನ್ ಸಿಂಹ ಹುಟ್ಟಿದ್ದು ಮಂಡ್ಯದ ಮಾರೆಹಳ್ಳಿ ತಾಲೂಕಿನಲ್ಲಿ. ಬೆಳೆದದ್ದು ಮೈಸೂರಿನ ನಂಜನಗೂಡಿನಲ್ಲಿ. ಓದಿನಲ್ಲಿ ಇವರು ಬಹಳ ಮುಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಇಂಗ್ಲೀಷ್ ಭಾಷೆ ಕಲಿತದ್ದು ಇವರಿಗೆ ಬಹಳ ಉಪಯೋಗವಾಯ್ತು. ಇವರು ಕೆಲಸ ಹುಡುಕಿ ಹೋಗಲಿಲ್ಲ. ಕೆಲಸವೇ ಇವರನ್ನು ಹುಡುಕಿ ಬಂತು.
ಹೆಚ್.ಎಲ್.ಎನ್. ಸಿಂಹ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಬಹಳ ಆಸಕ್ತಿ. ನಂಜನಗೂಡಿನ ಇವರ ಮನೆಯ ಪಕ್ಕದಲ್ಲಿ ಖ್ಯಾತ ಗಾಯಕಿ ತಿರುಮಲಾಂಬ ಎಂಬುವವರು ವಾಸವಿದ್ದರು. ಟೈಗರ್ ವರದಾಚಾರ್ ತಂಡ ನಂಜನಗೂಡಿಗೆ ಬಂದು ಬೀಡು ಬಿಟ್ಟಾಗ ಹೆಚ್.ಎಲ್.ಎನ್. ಸಿಂಹ ಅವರಿಗೆ ನಾಟಕದಲ್ಲೂ ಆಸಕ್ತಿ ಬೆಳೆಯಿತು. 'ಲಂಕಾದಹನ' 'ಸುಭದ್ರಾ ಕಲ್ಯಾಣ' ಬೀದಿ ನಾಟಕ ಇವರನ್ನು ಭಾರೀ ಸೆಳೆಯಿತು.
ಮೈಸೂರಿನಲ್ಲಿ ಓದುವಾಗ ಕುವೆಂಪು, ಟಿ. ದ್ವಾರಕನಾಥ್, ಪೀರ್ ಮೊಹಮದ್ ಹಾಗೂ ಲಕ್ಷ್ಮಿ ನರಸಿಂಹಯ್ಯ ಇವರ ಸಹಪಾಠಿಗಳಾಗಿದ್ದರು. ಇವರೆಲ್ಲರೂ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು.
ಶಾಲಾ ದಿನಗಳಲ್ಲಿ ನಾಟಕವೊಂದನ್ನು ಪ್ರದರ್ಶಿಸಿ ಹೆಚ್.ಎಲ್.ಎನ್. ಸಿಂಹ ಎಲ್ಲರ ಮೆಚ್ಚುಗೆ ಪಡೆದಿದ್ದರು. ನಾಟಕದಲ್ಲಿ ಆಸಕ್ತಿ ಇದ್ದ ಇವರನ್ನು ಶಾಲೆಯಲ್ಲಿ ನಾಟಕ ಮಾಡಲು ಆಯ್ಕೆ ಮಾಡಿಕೊಳ್ಳಲಿಲ್ಲವಂತೆ. ಆಗ ಎಲ್ಲರಿಗೂ ಚಾಲೆಂಜ್ ಮಾಡಿ ಒಂದು ಮರದ ಕೆಳಗೆ ಕುಳಿತು, 'ಡೆಸ್ಟಿನಿ ರೂಲ್ಸ್ ಹುಮ್ಯಾನಿಟಿ' ಎಂಬ ನಾಟಕ ರಚಿಸಿ ಪ್ರದರ್ಶಿಸಿದ್ದರಂತೆ. ಇವರ ನಾಟಕವನ್ನು ಆಗಿನ ಬ್ರಿಟಿಷ್ ಅಧಿಕಾರಿ ರೆ ಸ್ಪೆನ್ಸರ್ ಬಹಳವಾಗಿ ಮೆಚ್ಚಿಕೊಂಡು ಬಾಲಕ ಹೆಚ್.ಎಲ್.ಎನ್. ಸಿಂಹ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ.
ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜು ಹೆಚ್.ಎಲ್.ಎನ್. ಸಿಂಹ ಅವರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಹೆಚ್.ಎಲ್.ಎನ್. ಸಿಂಹ ಅವರ 'ಅಬ್ಬಾ ಆ ಹುಡುಗಿ' ಎಂಬ ನಾಟಕ ಪ್ರದರ್ಶನವಾಗಿತ್ತು. ಈ ವೇಳೆ ಈ ನಾಟಕ ವೀಕ್ಷಿಸಿದ ಕುವೆಂಪು ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ನನ್ನ ಮಿತ್ರನ ಯಶಸ್ಸು ಎಂದು ಹೇಳಿ ಕೊಂಡಾಡಿದ್ದರು.
ಇನ್ನು 2004 ರಲ್ಲಿ ಹೆಚ್.ಎಲ್.ಎನ್. ಸಿಂಹ ಅವರ ಜನ್ಮ ಶತಾಬ್ಧಿ ನಡೆದಾಗ ಇಂದು ನಾನು ಏನೂ ಆಗಿದ್ದೀನೋ ಎಲ್ಲದಕ್ಕೂ ಕಾರಣ ಹೆಚ್.ಎಲ್.ಎನ್ ಸಿಂಹ. ನಾನು ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ ಎಂದು ಹೇಳಿಕೊಂಡಿದ್ದರು.
1920 ರಲ್ಲಿ ಪಶ್ಚಿಮ ಬಂಗಾಳದ ರಾಜಕೀಯ ನಾಟಕಗಳು ಹೆಚ್.ಎಲ್.ಎನ್. ಸಿಂಹ ಅವರನ್ನು ಆಕರ್ಷಿಸಿ ಟಿಕೆಟ್ ಇಲ್ಲದೆ ಅಲ್ಲಿಗೆ ಪ್ರಯಾಣ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 20 ರೂಪಾಯಿ ಸಂಬಳಕ್ಕೆ ಪತ್ರಿಕೆಯೊಂದಕ್ಕೆ ಕೆಲಸಕ್ಕೆ ಸೇರುತ್ತಾರೆ. ಅಲ್ಲಿನ ವಾತಾವರಣ ಹಿಡಿಸದೆ ತಾವು ಪಡೆದ ಮುಂಗಡ ಹಣವನ್ನು ವಾಪಸ್ ನೀಡಿ ಬಂಗಾಳಿ ಖ್ಯಾತ ನಿರ್ದೇಶಕ ಹಾಗೂ ನಾಟಕಕಾರರೊಬ್ಬರ ಬಳಿ ರಂಗ ಚಟುವಟಿಕೆಗೆ ಮುನ್ನುಗ್ಗಿದ್ದಾರೆ. ಆದರೆ ಕೆಲವು ದಿನಗಳ ನಂತರ ಅದೂ ಸರಿ ಹೋಗದೆ ಅಲ್ಲಿಂದ ಕರ್ನಾಟಕಕ್ಕೆ ವಾಪಸ್ ಬಂದಿದ್ದಾರೆ.
ನಂತರ ಅಕ್ಕನ ಮಗಳು ಇಂದಿರಮ್ಮ ಅವರೊಂದಿಗೆ ಮದುವೆ ನಡೆಯುತ್ತದೆ. ಆ ವೇಳೆ ಇವರಿಗೆ ಗುಬ್ಬಿ ವೀರಣ್ಣ ಹಾಗೂ ಸುಬ್ಬಯ್ಯ ನಾಯ್ಡು ಬಹಳ ಹತ್ತಿರವಾಗುತ್ತಾರೆ. ಗುಬ್ಬಿ ವೀರಣ್ಣ ಹೆಚ್.ಎಲ್.ಎನ್. ಸಿಂಹ ಅವರ ಬಳಿ 'ಹಿಸ್ ಲವ್ ಅಫೇರ್' ಎಂಬ ನಾಟಕ ಬರೆಸುತ್ತಾರೆ. ಇವರು ಬರೆದ 'ಹರಿಮಾಯಿ' ಎಂಬ ನಾಟಕನ್ನು 1931 ರಲ್ಲಿ ವೈ.ವಿ. ರಾವ್ ಮೂಕಿ ಸಿನಿಮಾ ಆಗಿ ನಿರ್ದೇಶನ ಮಾಡಿದ್ದಾರೆ.
1953 ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಪಸ್ತಾಪ ನಡೆದು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಅವರ ಮಗ ಮುತ್ತುರಾಜ್ ಅವರ ನಾಟಕಗಳನ್ನು ನೋಡಿದ ನಂತರ ಆ ಚಿತ್ರಕ್ಕೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಾಗುತ್ತದೆ. ಮದುವೆ ನಂತರ ಕೂಡಾ ನಾಟಕಗಳಲ್ಲಿ ಸಕ್ರಿಯರಾಗಿದ್ದ ಮುತ್ತುರಾಜ್ ಅವರನ್ನು ಒಮ್ಮೆ ರೈಲ್ವೆ ಸ್ಟೇಷನ್ನಲ್ಲಿ ಭೇಟಿ ಮಾಡಿದ ಹೆಚ್.ಎಲ್.ಎನ್. ಸಿಂಹ ನಿಮಗೆ ಟೆಲಿಗ್ರಾಂ ಕಳಿಸುತ್ತೇನೆ. ಕೂಡಲೇ ಹೊರಟು ಬನ್ನಿ ಎಂದು ಹೇಳುತ್ತಾರೆ. ನಂತರ ಮುತ್ತುರಾಜ್ ಅವರಿಗೆ 1800 ರೂಪಾಯಿ ನೀಡಿ ಅವರಿಗೆ ರಾಜ್ಕುಮಾರ್ ಎಂದು ಹೆಚ್.ಎಲ್.ಎನ್. ಸಿಂಹ ಹೆಸರಿಡುತ್ತಾರೆ.
ಜಿ.ವಿ. ಅಯ್ಯರ್, ನರಸಿಂಹ ರಾಜು, ಪಂಡರಿ ಬಾಯಿ ಹಾಗೂ ಇತರರು ಅಭಿನಯಿಸಿದ ಸಿನಿಮಾ ಅಂದಿನ ಕಾಲದಲ್ಲಿ ಜಯಭೇರಿ ಬಾರಿಸಿತ್ತು. ಹೆಚ್.ಎಲ್.ಎನ್. ಸಿಂಹ ನಿರ್ದೇಶನ ಮಾಡಿದ್ದು ಕೇವಲ 6 ಕನ್ನಡ ಸಿನಿಮಾಗಳು. 1936 ರಲ್ಲಿ ಸಂಸಾರ ನೌಕೆ, 1953 ರಲ್ಲಿ ಗುಣ ಸಾಗರಿ, 1954 ರಲ್ಲಿ ಬೇಡರ ಕಣ್ಣಪ್ಪ, 1971 ರಲ್ಲಿ ಅಬ್ಬಾ ಆ ಹುಡುಗಿ, ತೇಜಸ್ವಿನಿ ಹಾಗೂ ಕೊನೆಯ ಸಿನಿಮಾ ಅನುಗ್ರಹ.
ತಮ್ಮ ಜೊತೆಗಿರುವವರು ಬೆಳೆದರೆ ಕೆಲವರು ಮತ್ಸರ ಪಡುತ್ತಾರೆ. ಆದರೆ ಹೆಚ್.ಎಲ್.ಎನ್. ಸಿಂಹ ಅವರಿಗೆ ಇದ್ದ ದೊಡ್ಡ ಗುಣವೆಂದರೆ ತಮ್ಮ ಜೊತೆಗಿರುವವರಿಗೆ ಪ್ರೋತ್ಸಾಹ ನೀಡುವುದು. ತಮ್ಮ ಸಿನಿಮಾಗಳಿಗೆ ಕು.ರಾ. ಸೀತಾರಾಮ ಶಾಸ್ತ್ರಿ ಅಂತವರನ್ನು ಕರೆದು ಗೀತೆಗಳನ್ನು ಬರೆಸುತ್ತಿದ್ದರು. ಒಟ್ಟಿನಲ್ಲಿ ನಿರ್ದೇಶನ ಮಾಡಿದ್ದು ಕೆಲವೇ ಚಿತ್ರಗಳಾದರೂ ಹೆಚ್.ಎಲ್.ಎನ್. ಸಿಂಹ ಸ್ಯಾಂಡಲ್ವುಡ್ ದಂತಕಥೆಯಾಗಿ ಉಳಿದಿದ್ದಾರೆ ಎಂದರೆ ತಪ್ಪಿಲ್ಲ.