ಮೋಹಕ ತಾರೆ ಹರಿಪ್ರಿಯಾ ಇತ್ತೀಚೆಗೆ ಕಾದಂಬರಿ ಮತ್ತು ಐತಿಹಾಸಿಕ ಆಧಾರಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದಲ್ಲಿ ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಇದೀಗ ಬರಗೂರು ರಾಮಚಂದ್ರಪ್ಪ ಅಮೃತಮತಿ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಲ್ಲಿ ಅಮೃತಮತಿ ಪಾತ್ರಕ್ಕೆ ಹರಿಪ್ರಿಯಾ ಜೀವ ತುಂಬುತ್ತಿದ್ದಾರೆ.

13 ನೇ ಶತಮಾನದ ಜನ್ನ ರಚಿಸಿದ ‘ಯಶೋಧರ ಚರಿತೆ’ ಕಾವ್ಯದಲ್ಲಿ ರಾಣಿ ಅಮೃತಮತಿಯ ಪಾತ್ರ ಬರುತ್ತದೆ. ರಾಣಿಯಾಗಿದ್ದ ಅಮೃತಮತಿಯು ಅಷ್ಟಾವಂಕ ಮಾವುತನ ಹಾಡಿಗೆ ಮನಸೋತು ತನ್ನ ವೈಭೋಗವನ್ನೆಲ್ಲ ಬಿಟ್ಟು ಹೋಗುತ್ತಾಳೆ. ಇದಕ್ಕೆ ಮನೆಯಲ್ಲಿ ಒಪ್ಪಿಗೆ ಇಲ್ಲದ ಕಾರಣ ಎಲ್ಲರಿಗೂ ಊಟದಲ್ಲಿ ವಿಷ ಬೆರಸಿ ಹತ್ಯೆಗೆ ಕಾರಣವಾಗುತ್ತಾಳೆ. ಈ ಕಾವ್ಯವನ್ನು ಆಧಾರವಾಗಿಟ್ಟುಕೊಂಡು ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಅಮೃತಮತಿ ಸಿನಿಮಾ ರೆಡಿಯಾಗುತ್ತಿದೆ.

ಆದರೆ ಪ್ರೊ.ಬರಗೂರು ರಾಮಚಂದ್ರಪ್ಪ ಯಶೋಧರ ಕಾವ್ಯದ ವಿಚಾರವನ್ನು, ಭೋಗ-ಸುಖ, ಬಂಧನ-ಬಿಡುಗಡೆ, ಪ್ರಭುತ್ವ-ಜನತೆ ಈ ವೈರುಧ್ಯಗಳ ಮುಖಾಂತರ ತೆರೆ ಮೇಲೆ ತರಲಿದ್ದಾರೆ. ಸದ್ಯಕ್ಕೆ ಈ ಸಿನಿಮಾ ರೆಡಿಯಾಗಿದ್ದು, ಸೆನ್ಸಾರ್ ಮನ್ನಣೆ ಪಡೆಯಲು ಕಾಯುತ್ತಿದೆ. ಸಿನಿಮಾದಲ್ಲಿ ಅಮೃತಮತಿ ಪಾತ್ರದಲ್ಲಿರುವ ಹರಿಪ್ರಿಯಾ ಫೋಟೋಗಳು ಈಗಾಗಲೇ ಹೊರ ಬಿದ್ದಿದ್ದು, ನೋಡುಗರನ್ನು ಮನ ಸೂರೆ ಮಾಡುತ್ತಿವೆ.

ಚಿತ್ರವನ್ನು ಎಲ್.ಎಲ್.ಸಿ ಪುಟ್ಟಣ್ಣ ಅವರು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅಮೃತಮತಿಯಾಗಿ ಹರಿಪ್ರಿಯಾ ಕಾಣಿಸಿಕೊಂಡರೆ, ಸಿನಿಮಾದಲ್ಲಿ ಕಿಶೋರ್, ತಿಲಕ್, ಸುಪ್ರಿಯ ರಾವ್, ಅಂಬರೀಶ್ ಸಾರಂಗಿ, ಸುಂದರ್ ರಾಜ್, ಪ್ರಮಿಳ ಜೋಶೈ, ವತ್ಸಲಾ ಮೋಹನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಪ್ರೊ ಬರಗೂರು ರಾಮಚಂದ್ರಪ್ಪ ನಿರ್ವಹಿಸಿದರೆ , ಸುರೇಶ್ ಅರಸ್ ಸಂಕಲನ, ನಾಗರಾಜ ಅಡ್ವಾಣಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
