ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಒಂದೂವರೆ ವರ್ಷದಿಂದ ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಇಂದು ಬಂದಿದೆ.
ಇನ್ನು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ದರ್ಶನ್ ರೈತರ ಪರ ಕಾಳಜಿ ಇರುವ ಯಜಮಾನನಾಗಿ ಕಾಣಿಸಿಕೊಂಡಿದ್ದಾರೆ. ಅದರೊಂದಿಗೆ ಈ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ದರ್ಶನ್ ಎಂದಿನಂತೆ ತಮ್ಮ ಡೈಲಾಗ್, ಲುಕ್, ಆ್ಯಕ್ಟಿಂಗ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ರೈತರ ಪರ ಕಾಳಜಿ ಇರುವ ಸಾಕಷ್ಟು ಸಿನಿಮಾಗಳು ಸ್ಯಾಂಡಲ್ವುಡ್ನಲ್ಲಿ ತಯಾರಾಗಿವೆ. ಮಲ್ಟಿ ನ್ಯಾಷನಲ್ ಕಂಪನಿಗಳು ರೈತರ ಭೂಮಿಯನ್ನು ಆಕ್ರಮಿಸಲು ಬಂದಾಗ ತಾನು ಹೋರಾಟ ಮಾಡಿ ರೈತರನ್ನು ಉಳಿಸುವ ಕಥೆ ಡಾ. ವಿಷ್ಣುವರ್ಧನ್ ಅಭಿನಯದ ‘ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದಲ್ಲಿ ಬಂದಿತ್ತು. ಯಜಮಾನ ಸಿನಿಮಾದಲ್ಲಿ ರೈತರು ಬೆಳೆದ ಉತ್ಪನ್ನ ಹಣವಂತರ ಪಾಲಾಗಿ ರೈತರಿಗೆ ಆಗಬಹುದಾದ ಅನ್ಯಾಯದ ವಿರುದ್ಧ ನಾಯಕ ದೊಡ್ಡ ಯುದ್ಧವನ್ನೇ ಸಾರುತ್ತಾನೆ.
ಹುಲಿದುರ್ಗ ಎಂಬ ಊರಿನಲ್ಲಿ ಕೃಷ್ಣ ( ದರ್ಶನ್ ) ನಂದಿ ಬ್ರಾಂಡ್ ಎಣ್ಣೆ ತಯಾರಿಸುವ ರೈತ. ಈ ಊರಿನ ರೈತರ ಏಳಿಗೆಯನ್ನು ಸಹಿಸದ ಗ್ಲೋಬಲ್ ಈಗಲ್ ಎಣ್ಣೆ ಕಂಪನಿ ತನ್ನ ಬ್ರಾಂಡನ್ನು ಫೇಮಸ್ ಮಾಡಲು ಏನೆಲ್ಲಾ ಷಡ್ಯಂತ್ರ ಮಾಡುತ್ತದೆ. ಇದರಿಂದ ಕೃಷ್ಣ ಹಾಗೂ ಹುಲಿದುರ್ಗದ ರೈತರಿಗೆ ಉಂಟಾಗುವ ತೊಂದರೆ ಏನು.. ಕೊನೆಗೆ ಆ ತೊಂದರೆಯಿಂದ ಹೊರಬರಲು ಕೃಷ್ಣ ಏನೆಲ್ಲಾ ಮಾಡುತ್ತಾನೆ ಎಂಬುದೇ ಚಿತ್ರಕಥೆ.
ರಶ್ಮಿಕಾಮಂದಣ್ಣ, ತಾನ್ಯಾ ಹೋಪ್ ಅಭಿನಯ ಕೂಡಾ ಚೆನ್ನಾಗಿದೆ. ಬಸಣ್ಣಿ ಹಾಡಿನಲ್ಲಿ ತನ್ಯಾ ಸಖತ್ ಮಿಂಚಿದ್ದಾರೆ. ಹೀರೋ ಇಂಟ್ರೊಡಕ್ಷನ್ ಹಾಡಿನಲ್ಲಿ ನೆನಪಿರಲಿ ಪ್ರೇಮ್, ಪ್ರಜ್ವಲ್, ವಿನೋದ್ ಪ್ರಭಾಕರ್, ಚಿರಂಜೀವಿ ಸರ್ಜಾ ಬಂದು ಹೋಗುತ್ತಾರೆ. ದೇವರಾಜ್ ಅವರ ಗಾಂಭೀರ್ಯ, ಧನಂಜಯ್ ಅವರ ಪಾತ್ರ, ರವಿಶಂಕರ್ ಅವರ ಸಂಭಾಷಣೆ ಶೈಲಿ, ಸುಂದರಮ್ಮ, ಮಂಡ್ಯ ರಮೇಶ್, ದತ್ತಣ್ಣ, ಸಾಧು ಕೋಕಿಲ, ಗಿರಿ, ಕೃಷ್ಣ ಹೆಬ್ಬಾಳ ಅವರ ಪಾತ್ರಗಳು ಸಹ ಮನಸಿಗೆ ಹಿಡಿಸುತ್ತವೆ.
ನಿರ್ದೇಶಕ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಕೂಡಾ ಬಹಳ ಚೆನ್ನಾಗಿದೆ. ಪಿ. ಕುಮಾರ್ ಕೂಡಾ ಜಂಟಿ ನಿರ್ದೇಶಕ. ಶಶಿಧರ್ ಅಡಪ ಅವರ ಕಲಾ ನಿರ್ದೇಶನ ಬಹಳ ಸೊಗಸಾಗಿದೆ. ಮೀಡಿಯಾ ಹೌಸ್ ಬ್ಯಾನರ್ ಅಡಿ ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ 1 ವಾರದ ನಂತರ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ.