ಶಿವರಾಜ್ ಕುಮಾರ್ ಅಂದಾಕ್ಷಣ ನಮಗೆ ನೆನಪಾಗೋದು ಅವರ ಅದ್ಭುತ ಅಭಿನಯ ಹಾಗೂ ನೃತ್ಯ. ತಂದೆ ವರನಟ ಡಾ.ರಾಜ್ ಕುಮಾರ್ ಆದರ್ಶಗಳನ್ನು ಪಾಲಿಸುತ್ತಿರುವ ಶಿವಣ್ಣ ನಟರಷ್ಟೇ ಅಲ್ಲ, ಅದ್ಭುತ ಗಾಯಕರೂ ಆಗಿದ್ದಾರೆ. ಅಷ್ಟಕ್ಕೂ ಶಿವರಾಜ್ ಕುಮಾರ್ ಸಿಂಗರ್ ಆಗಿದ್ದೇ ಒಂದು ಇಂಟ್ರೆಸ್ಟಿಂಗ್ ಕಹಾನಿ.
ಚಿತ್ರರಂಗದಲ್ಲಿ ನಾಯಕ ನಟರು ಗಾಯಕರಾಗುವ ಸಂಸ್ಕೃತಿ, ಬಾಲಿವುಡ್ ನಟ ಕಿಶೋರ್ ಕುಮಾರ್ ಮತ್ತು ಡಾ ರಾಜ್ ಕುಮಾರ್ ಕಾಲದಿಂದಲೂ ಇದೆ. ನಟರು ಗಾಯಕರಾಗಬೇಕು ಅಂದರೆ, ಶೃತಿ, ಧ್ವನಿ ಚೆನ್ನಾಗಿrಬೇಕು ಮತ್ತು ಅವರಿಗೆ ಹಾಡೋಕೆ ಬರಬೇಕಿತ್ತು. ಆದರೆ ಬರು ಬರುತ್ತಾ ಕನ್ನಡ ಚಿತ್ರರಂಗದಲ್ಲಿ ಬದಲಾಣೆಯ ಗಾಳಿ ಬೀಸತೊಡಗಿತು. ಯಾವಾಗ ಡಾ.ರಾಜ್ ಕುಮಾರ್ ಅಭಿನಯದ ಜೊತೆಗೆ ಹಾಡು ಹಾಡೋಕೆ ಶುರು ಮಾಡಿದ್ರೋ, ನಟ - ನಟಿಯರು ಕೂಡ ಹಾಡುವ ಟ್ರೆಂಡ್ ಶುರುವಾಯಿತು. ತಂದೆಯ ಸ್ಫೂರ್ತಿಯಿಂದ ಶಿವರಾಜ್ ಕುಮಾರ್ಗೆ ಹಾಡುವ ಆಸಕ್ತಿ ಹುಟ್ಟಿತು.
ಆನಂದ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿವರಾಜ್ ಕುಮಾರ್, 1988ರಲ್ಲಿ ತಮ್ಮದೇ ಅಭಿನಯದ ರಣರಂಗ ಸಿನಿಮಾದಲ್ಲಿ ಓ ಮೇಘವೇ ನಿಧಾನವಾಗಿ ನೀ ಬಾ, ಎಂಬ ಡ್ಯುಯೆಟ್ ಹಾಡನ್ನು ಹಾಡಿದ್ರು. ಇದಕ್ಕೆ ಕಾರಣ ಸಂಗೀತ ನಿರ್ದೇಶಕ ಹಂಸಲೇಖ ಅನ್ನೋದು ಸ್ವತಃ ಶಿವರಾಜ್ ಕುಮಾರ್ ಅವರೇ ಹೇಳುವ ಮಾತು.
ರಣರಂಗ ಸಿನಿಮಾದಿಂದ ಗಾಯಕರಾದ ಸೆಂಚುರಿ ಸ್ಟಾರ್, ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಮತ್ತೆ ಹಾಡಿದರು. 1990ರಲ್ಲಿ ಬಂದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದು, ಅಣ್ಣನಿಗೆ ಜೊತೆಯಾಗಿ ರಾಘವೇಂದ್ರ ರಾಜ್ ಕುಮಾರ್ ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟೋ ಎಂಬ ಹಾಡಿಗೆ ಧ್ವನಿಗೂಡಿಸಿದ್ದರು.
90 ರದಶಕದಲ್ಲಿ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿಯಾಗಿತ್ತು. ಇವರಿಬ್ಬರ ಕಾಂಬಿನೇಶನ್ನಲ್ಲಿ ಬಂದ ತಾನನ ತಂದನಾ ಕುಣಿಸಿದ ಯೌವನ ಎಂಬ ಡ್ಯುಯೆಟ್ ಹಾಡು ಸೂಪರ್ ಹಿಟ್ ಆಗಿತ್ತು. ಉದಯ್ ಕುಮಾರ್ ಸಾಹಿತ್ಯಕ್ಕೆ ಉಪೇಂದ್ರ ಕುಮಾರ್ ಸಂಗೀತವಿತ್ತು.
1996ರಲ್ಲಿ ಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬಂದ ಜನುಮದ ಜೋಡಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಎತ್ತಿನ ಗಾಡಿಯಲ್ಲಿ ನಟಿ ಶಿಲ್ಪಾ ಜೊತೆಗೆ ಮಣಿ ಮಣಿ ಎಂದು ಹಾಡೋದರ ಮೂಲಕ ಹೊಸ ಟ್ರೆಂಡ್ ಶುರು ಮಾಡಿದರು. ಈ ಚಿತ್ರಕ್ಕೆ ಮನೋಹರ್ ಸಂಗೀತ ನಿರ್ದೇಶನವಿತ್ತು.
ಇದನ್ನೂ ಓದಿ:ಹ್ಯಾಟ್ರಿಕ್ ಹೀರೋ @ 59: ಶುಭಾಶಯ ಕೋರಿದ ಕಿಚ್ಚ
ಬಳಿಕ 1988ರಲ್ಲಿ ಕಿರಿಯ ಮಗಳು ನಿವೇದಿತಾ ಜೊತೆಗೆ ನಟಿಸಿದ ಅಂಡಮಾನ್ ಸಿನಿಮಾದಲ್ಲಿ, ಅಂಡಮಾನ್ ಅಂಡಮಾನ್ ಎಂದು ಹಾಡುತ್ತಾ ಸಖತ್ ಸ್ಟೆಪ್ ಹಾಕಿದ್ದರು. ಶಿವಣ್ಣನ ಹಾಡಿಗೆ ಜೊತೆ ಗಾಯಕಿ ಚಿತ್ರಾ ಸಾಥ್ ನೀಡಿದ್ದರು. ಈ ಹಾಡು ಆವತ್ತಿನ ದಿನಗಳ ಅಪ್ಪ ಮಗಳ ಫೇವ್ರೆಟ್ ಸಾಂಗ್ ಆಗಿತ್ತು.
ಹಾಗೆಯೇ 2000 ರಲ್ಲಿ ಶಿವಣ್ಣ ಮತ್ತು ಎಸ್.ನಾರಾಯಣ್ ಒಟ್ಟಿಗೆ ಅಭಿನಯಿಸಿರುವ ಚಿತ್ರ ಗಲಾಟೆ ಅಳಿಯಂದ್ರು ಸಿನಿಮಾದಲ್ಲೂ ಹಾಡು ಹಾಡಿದ್ದು, 2010 ಕ್ಕೆ ಚೆಲುವೆಯೇ ನಿನ್ನ ನೋಡಲು ಸಿನಿಮಾದಲ್ಲೂ ತನ್ನ ಹಾಡಿನ ಚಾತುರ್ಯ ತೋರಿಸಿದ್ದರು. ನಿರ್ದೇಶಕ ರಾಘುರಾಮ್ ಚಿತ್ರ ಇದಾಗಿದೆ.
ಇದನ್ನೂ ಓದಿ: ಪ್ರೇಮಕಥೆಯಲ್ಲಿ ಹ್ಯಾಟ್ರಿಕ್ ಹೀರೋ.. ಸದ್ಯದಲ್ಲೇ ಸಿನಿಮಾ ಪ್ರಾರಂಭ
ಗಂಡನ ಮನೆ, ತಾಯಿಯ ಮಡಿಲು, ಲಕ್ಷ್ಮೀ, ಕಿಲ್ಲಿಂಗ್ ವೀರಪ್ಪನ್, ಶ್ರೀಕಂಠ ಹೀಗೆ ತಮ್ಮ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಹಾಡುಗಳನ್ನ ಹಾಡಿದ್ದಾರೆ. ಅಷ್ಟೇ ಅಲ್ಲ ತಾರಕಾಸುರ, ಕನ್ನಡಿಗ ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾಗಳಿಗೂ ಸೆಂಚುರಿ ಸ್ಟಾರ್ ಹಾಡಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ನಟನಾಗಿದ್ದುಕೊಂಡು, ಗಾಯಕರಾಗಿರುವ ಬೆರಳೆಣಿಕೆ ಕಲಾವಿದರಲ್ಲಿ ಶಿವರಾಜ್ ಕುಮಾರ್ ಕೂಡ ಒಬ್ಬರು.