ಸುದೀಪ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ 7 ಆರಂಭವಾಗಿ ಎರಡು ವಾರಗಳು ಕಳೆದಿವೆ. ಈಗಾಗಲೇ ಮನೆಯಲ್ಲಿ ಟಾಸ್ಕ್, ಸ್ಪರ್ಧಿಗಳ ನಡುವೆ ಮನಸ್ತಾಪ, ಜಗಳ ಆರಂಭವಾಗಿದೆ.
ಇನ್ನು ಈ ಬಾರಿ ಬಿಗ್ಬಾಸ್ ಮನೆಗೆ ನಟಿ, ಬರಹಗಾರ್ತಿ ಚೈತ್ರಾ ಕೊಟ್ಟೂರು ಕೂಡಾ ಎಂಟ್ರಿ ನೀಡಿದ್ದಾರೆ. 'ಸೂಜಿದಾರ' ಸಿನಿಮಾ ಬಿಡುಗಡೆಯಾದಾಗ ಹರಿಪ್ರಿಯಾ, ಚಿತ್ರದ ನಿರ್ದೇಶಕ ಹಾಗೂ ಚೈತ್ರಾ ಕೊಟ್ಟೂರು ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಈ ಘಟನೆಯೇ ಚೈತ್ರಾ ಕೊಟ್ಟೂರು ಬಿಗ್ಬಾಸ್ ಮನೆಗೆ ಹೋಗಲು ಕಾರಣವಾಯ್ತು ಎನ್ನಲಾಗುತ್ತಿದೆ. ಚಿತ್ರದಲ್ಲಿ ನನ್ನ ಪಾತ್ರಕ್ಕಿಂತ ಚೈತ್ರಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ, ಸ್ಕ್ರಿಪ್ಟ್ ಬದಲಿಸಲಾಗಿದೆ ಎಂದು ಹರಿಪ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲು ಕೂಡಾ ಏರಿತ್ತು.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹರಿಪ್ರಿಯಾ, 'ಸೂಜಿದಾರ' ಚಿತ್ರದಲ್ಲಿ ನಾನು ಅವರೊಂದಿಗೆ ಹೆಚ್ಚಾಗಿ ನಟಿಸಿಲ್ಲ, ಆದ್ದರಿಂದ ಅವರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ನನ್ನ ಹೆಸರು ಹೇಳಿಕೊಂಡು ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ, ನನಗೆ ಸಂತೋಷವೇ. ಅಂತವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದರು. ಇನ್ನು ನನಗೆ ಸುದೀಪ್ ನಿರೂಪಣೆ ಎಂದರೆ ಬಹಳ ಇಷ್ಟ. ಶೂಟಿಂಗ್, ಡಬ್ಬಿಂಗ್ ಎಂದು ಬ್ಯುಸಿ ಇದ್ದೇನೆ. ಬಿಡುವು ಮಾಡಿಕೊಂಡು ಬಿಗ್ಬಾಸ್ ನೋಡುತ್ತೇನೆ ಎಂದು ಹರಿಪ್ರಿಯಾ ಹೇಳಿದರು.